ಬೆಂಗಳೂರು: ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ. ದೈಹಿಕ ಮತ್ತು ಮಾನಸಿಕ ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್‌ಮೇಲ್ ಕುರಿತು ದೂರು ದಾಖಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವ, ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ.
ಬೆಂಗಳೂರಿನ ತ್ಯಾಗರಾಜನಗರ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆಯೊಬ್ಬರು ಈ ದೂರು ನೀಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಭಕ್ತೆಯಾಗಿರುವ ಸಂತ್ರಸ್ತೆ, ಕೂಡಲ ಸಂಗಮದ ಮಹಾಪೀಠದ ಪೀಠಾಧಿಪತಿಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಭಕ್ತೆಯಾಗಿದ್ದರು. ಬೆಂಗಳೂರಿಗೆ ಬಂದಾಗ ಹಲವು ಬಾರಿ ಸ್ವಾಮೀಜಿಗಳನ್ನು ಭೇಟಿಯಾಗಿ, ಅವರ ಹೋರಾಟಗಳಿಗೆ ಬೆಂಬಲ ನೀಡಿದ್ದರು. ಈ ಪರಿಚಯದ ಮೂಲಕ ಸ್ವಾಮೀಜಿ ತಮ್ಮ ಮಠಕ್ಕೆ ಕರೆಸಿಕೊಂಡಿದ್ದರು.
'ಪ್ರಸಾದ ಕೊಡುತ್ತೇನೆ' ಎಂದು ನಂಬಿಸಿ, ತಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು, ಅಸಭ್ಯವಾಗಿ ವರ್ತಿಸಿ, ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ದೌರ್ಜನ್ಯ ಎಸಗುವ ವೇಳೆ ತಮ್ಮ ಅರಿವಿಲ್ಲದೆ ಖಾಸಗಿ ವಿಡಿಯೋ ಮಾಡಿಕೊಳ್ಳಲಾಗಿದೆ. ಈ ವಿಡಿಯೋವನ್ನು ಬಳಸಿ ಸ್ವಾಮೀಜಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಪ್ರತಿ ರಾತ್ರಿ ಫೋನ್ ಮಾಡಿ ಬೆತ್ತಲೆ ವಿಡಿಯೋ ಕಾಲ್‌ಗೆ ಒತ್ತಾಯಿಸುತ್ತಿದ್ದರು. 'ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ' ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ತೀವ್ರ ಭಯ, ಮಾನಸಿಕ ಒತ್ತಡ ಹಾಗೂ ಅವಮಾನಕ್ಕೆ ಒಳಗಾಗಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ.
PublicNext
07/04/2026 01:10 pm