ಫರುಖಾಬಾದ್ (ಉತ್ತರ ಪ್ರದೇಶ): ಸಿನಿಮಾ ಸ್ಟೈಲ್‌ನಲ್ಲಿ ನಡುರಸ್ತೆಯಲ್ಲೇ ಪತ್ನಿ ಮನೆಯವರು ಪತಿಯ ಮೇಲೆ ದಾಳಿ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರುಖಾಬಾದ್‌ನಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದ್ದು, ಪತಿ ತನ್ನ ಮಹೀಂದ್ರಾ ಥಾರ್ ವಾಹನದಲ್ಲಿ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ದೂರದ ಪ್ರಯಾಣ ಮುಗಿಸಿ ಬಂದಿದ್ದ ವ್ಯಕ್ತಿ ಢಾಬಾ ಒಂದರ ಮುಂದೆ ತನ್ನ ಥಾರ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ತನ್ನ ಸಂಬಂಧಿಕರೊಂದಿಗೆ ಸ್ಥಳಕ್ಕೆ ಬಂದ ಪತ್ನಿ, ಪತಿಯ ಜೊತೆ ಜಗಳ ತೆಗೆದಿದ್ದಾರೆ. ನೋಡನೋಡುತ್ತಿದ್ದಂತೆ ಪತ್ನಿಯ ಕಡೆಯ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ಥಾರ್ ವಾಹನವನ್ನು ಸುತ್ತುವರೆದಿದ್ದಾರೆ.
ಮೊದಲಿಗೆ ಪತಿಯನ್ನು ಮಾತಿನ ಮೂಲಕ ಕೆಳಗಿಳಿಸಲು ಯತ್ನಿಸಿದ ಪತ್ನಿಯ ಕಡೆಯವರು, ಆತ ಇಳಿಯದಿದ್ದಾಗ ಹಿಂಸಾಚಾರಕ್ಕೆ ಇಳಿದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಪತಿ, ಕೂಡಲೇ ಎಂಜಿನ್ ಸ್ಟಾರ್ಟ್ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಂಬಂಧಿಕರು ಕಲ್ಲು ಮತ್ತು ಕೋಲುಗಳಿಂದ ಥಾರ್ ಮೇಲೆ ದಾಳಿ ನಡೆಸಿ, ಗಾಜು ಒಡೆಯಲು ಯತ್ನಿಸಿದ್ದಾರೆ.
ಪತಿ ಹೇಗೋ ಪ್ರಾಣ ಉಳಿಸಿಕೊಂಡು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಂತೆ, ಪತ್ನಿ ಮನೆಯವರು ತಮ್ಮ ಎರಡು ಕಾರುಗಳಲ್ಲಿ ಆತನನ್ನು ಬೆನ್ನಟ್ಟಿದ್ದಾರೆ. ಇದು ಅತ್ಯಂತ ವ್ಯವಸ್ಥಿತವಾಗಿ ನಡೆದ ದಾಳಿ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಘಟನೆಯ ವೇಳೆ ಪತ್ನಿಯ ಕಡೆಯವರು ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ, ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯಾವುದೇ ಬಂದೂಕು ಅಥವಾ ಗುಂಡಿನ ಸದ್ದು ಕೇಳಿಬಂದಿಲ್ಲ.
ಘಟನೆಗೆ ಸಂಬಂಧಿಸಿದಂತೆ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PublicNext
07/04/2026 05:06 pm