ಇಂಫಾಲ: ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಕಿಚ್ಚು ಹೊತ್ತಿಕೊಂಡಿದೆ. ವಿಷ್ಣುಪುರ ಜಿಲ್ಲೆಯ ತೌಂಗ್ಲಾಬಿ ಗ್ರಾಮದಲ್ಲಿ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಇಬ್ಬರು ಅಮಾಯಕ ಮಕ್ಕಳು ಬಲಿಯಾಗಿದ್ದು, ಈ ಘಟನೆಯ ಬೆನ್ನಲ್ಲೇ ನಡೆದ ಪ್ರತಿಭಟನೆ ವೇಳೆ ಸಿಆರ್‌ಪಿಎಫ್ (CRPF) ನಡೆಸಿದ ಗುಂಡಿನ ದಾಳಿಗೆ ಮೂವರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.
ಮಂಗಳವಾರ ಮುಂಜಾನೆ ತೌಂಗ್ಲಾಬಿ ಗ್ರಾಮದ ಮೇಲೆ ಶಂಕಿತ ಕುಕಿ ಸಶಸ್ತ್ರ ದುಷ್ಕರ್ಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ವಿಷ್ಣುಪುರದಲ್ಲಿರುವ ಸಿಆರ್‌ಪಿಎಫ್ ಕ್ಯಾಂಪ್ ಎದುರು ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಿಯಂತ್ರಣ ತಪ್ಪಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದಾಗ, ಪರಿಸ್ಥಿತಿ ತಿಳಿಗೊಳಿಸಲು ಸಿಆರ್‌ಪಿಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.
ಸಿಆರ್‌ಪಿಎಫ್ ಗೋಲಿಬಾರ್‌ನಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂಫಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ರಾಜ್ಯ ಸರ್ಕಾರವು ವಿಷ್ಣುಪುರ, ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ಕಾಕ್ಚಿಂಗ್ ಮತ್ತು ತೌಬಲ್ ಜಿಲ್ಲೆಗಳಲ್ಲಿ 3 ದಿನಗಳ ಕಾಲ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಸೋಶಿಯಲ್ ಮೀಡಿಯಾ ಮೂಲಕ ವದಂತಿಗಳು ಹಬ್ಬಿ ಸಾರ್ವಜನಿಕ ಶಾಂತಿಗೆ ಭಂಗ ತರುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಯುಮ್ನಮ್ ಖೇಮಚಂದ್ ಸಿಂಗ್ ಅವರು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಿದರು. ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು ಮತ್ತು ಸೇನಾಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
PublicNext
07/04/2026 05:59 pm