ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ನ್ಯಾಯಾಲಯ ಈ ಹಿಂದೆ ಸಲ್ಲಿಸಿದ್ದ 'ಬಿ' ವರದಿಯನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಇದೀಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇಡಿ ತನ್ನ ಅರ್ಜಿಯಲ್ಲಿ, ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರ ಮೇಲಿನ ಆರೋಪಗಳಿಗೆ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ಪ್ರತಿಪಾದಿಸಿದ್ದು, ಪ್ರಕರಣದ ಮರು ತನಿಖೆಗೆ ಆಗ್ರಹಿಸಿದೆ.
ಕೆಳ ಹಂತದ ನ್ಯಾಯಾಲಯವು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ 'ಬಿ' ವರದಿಯನ್ನು ಅಂಗೀಕರಿಸಿತ್ತು. ಆದರೆ, ಇಡಿ ಅಧಿಕಾರಿಗಳು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. "ನಮ್ಮ ತನಿಖೆಯಲ್ಲಿ ಸಾಕಷ್ಟು ಮಹತ್ವದ ಮಾಹಿತಿ ಬಹಿರಂಗವಾಗಿದೆ. ಮುಡಾದಲ್ಲಿ ಸ್ಪಷ್ಟವಾಗಿ ಹಗರಣ ನಡೆದಿದ್ದು, ನಾಲ್ವರು ಆರೋಪಿಗಳ ಪಾತ್ರಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ" ಎಂದು ಇಡಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ, ಪ್ರಕರಣದ ಸಮಗ್ರ ಮರು ತನಿಖೆಗೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ. ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯ ನಂತರ ಇಡಿಯಿಂದಲೂ ಈ ಅರ್ಜಿ ಸಲ್ಲಿಕೆಯಾಗಿದೆ.
ಈ ಕುರಿತು ಪ್ರಕರಣದ ಮೂಲ ದೂರುದಾರ ಸ್ನೇಹಮಯಿ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. "ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬಕ್ಕೆ ಸಿಕ್ಕಿರುವುದು ಕೇವಲ ತಾತ್ಕಾಲಿಕ ರಿಲೀಫ್ ಅಷ್ಟೇ. ಈ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ಜೈಲು ಶಿಕ್ಷೆ ಆಗುವುದು ಖಚಿತ" ಎಂದು ದೃಢವಾಗಿ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ಹೇಳಿರುವಂತೆ, ಆರೋಪಿಗಳ ಮೇಲಿನ ಆರೋಪಗಳಿಗೆ ನನ್ನ ಬಳಿಯೂ ಬಹಳಷ್ಟು ಸಾಕ್ಷ್ಯಾಧಾರಗಳಿವೆ. "ಈ ಪ್ರಕರಣದಲ್ಲಿ 'ಬಿ' ವರದಿ ಸಲ್ಲಿಸಿದ ಲೋಕಾಯುಕ್ತ ಅಧಿಕಾರಿಗಳಿಗೂ ಶಿಕ್ಷೆ ಕೊಡಿಸುತ್ತೇನೆ" ಎಂದು ಸ್ನೇಹಮಯಿ ಕೃಷ್ಣ ಸವಾಲು ಹಾಕಿದ್ದಾರೆ.
PublicNext
07/04/2026 01:38 pm