ಚೆನ್ನೈ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ಸಾಥಾನ್‌ಕುಲಂನ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಭೀಕರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 6, 2026 ರಂದು ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಈ ಪ್ರಕರಣದಲ್ಲಿ ಒಂಬತ್ತು ಮಂದಿ ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಈ ನ್ಯಾಯದ ಹಿಂದೆ ನಿಂತಿದ್ದು ಒಬ್ಬ ಸಾಮಾನ್ಯ ಪೊಲೀಸ್ ಕಾನ್ಸ್ಟೆಬಲ್ ರೇವತಿ ಅವರ ಅದಮ್ಯ ಧೈರ್ಯ!
2020ರ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನಡೆದ ಈ ಘಟನೆಗೆ ರೇವತಿ ಅವರು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದರು. ಅಂದು ರಾತ್ರಿ ಕರ್ತವ್ಯದಲ್ಲಿದ್ದ ಅವರು ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ವಿವರಗಳು ಎಂತವರನ್ನೂ ನಡುಗಿಸುವಂತಿದ್ದವು. ತಂದೆ-ಮಗನನ್ನು ಪೊಲೀಸರು ಬೆತ್ತಲೆಗೊಳಿಸಿ, ಅವರ ಗುಪ್ತಾಂಗಗಳ ಮೇಲೆ ತುಳಿದು ಕ್ರೂರವಾಗಿ ಹಲ್ಲೆ ಮಾಡಿದ್ದನ್ನು ರೇವತಿ ವಿವರಿಸಿದ್ದಾರೆ.
ಹಲ್ಲೆ ಮಾಡುತ್ತಿದ್ದ ಪೊಲೀಸರು ಮಧ್ಯೆ ಮಧ್ಯೆ ವಿರಾಮ ಪಡೆದು ಮದ್ಯ ಸೇವಿಸುತ್ತಿದ್ದರು ಎಂಬ ಕಹಿ ಸತ್ಯವನ್ನು ಅವರು ಬಯಲು ಮಾಡಿದ್ದರು. ಘಟನೆಯ ನಂತರ ರಕ್ತಸಿಕ್ತವಾಗಿದ್ದ ಗೋಡೆ ಮತ್ತು ಪೀಠೋಪಕರಣಗಳನ್ನು ಪೊಲೀಸರು ಸ್ವಚ್ಛಗೊಳಿಸಿದ್ದರು. ಆದರೆ, ರೇವತಿ ಅವರು ಚಾಣಾಕ್ಷತನದಿಂದ ಅಲ್ಲಿ ಉಳಿದಿದ್ದ ಡಿಎನ್‌ಎ (DNA) ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖಾ ತಂಡಕ್ಕೆ ನೀಡಿದ್ದರು.
ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸಂತ್ರಸ್ತರಿಗೆ ರೇವತಿ ಅವರು ರಹಸ್ಯವಾಗಿ ನೀರು ಮತ್ತು ಕಾಫಿ ನೀಡಿ ಮಾನವೀಯತೆ ಮೆರೆದಿದ್ದರು. ತಮ್ಮದೇ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ವಿರುದ್ಧ ಸಾಕ್ಷಿ ನುಡಿಯುವುದು ರೇವತಿ ಅವರಿಗೆ ಸುಲಭವಾಗಿರಲಿಲ್ಲ. ಪ್ರಭಾವಿ ಪೊಲೀಸ್ ಅಧಿಕಾರಿಗಳ ಬೆದರಿಕೆಗೂ ಬಗ್ಗದ ಅವರು ನ್ಯಾಯದ ಪರವಾಗಿ ಗಟ್ಟಿಯಾಗಿ ನಿಂತರು. ಅವರ ಈ ಒಂದು ಸಾಕ್ಷ್ಯವೇ ಇಂದು 9 ಮಂದಿ ಕೊಲೆಗಾರ ಪೊಲೀಸರನ್ನು ಗಲ್ಲಿಗೇರಿಸಲು ಮುಖ್ಯ ಕಾರಣವಾಗಿದೆ.
ರೇವತಿ ಅವರ ಫೋಟೋ ಮತ್ತು ಸಾಹಸದ ಕಥೆ ಈಗ 'X'(ಟ್ವಿಟ್ಟರ್) ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಅವರನ್ನು "ರಿಯಲ್ ಹೀರೋ" ಎಂದು ಕೊಂಡಾಡುತ್ತಿದ್ದಾರೆ. ರೇವತಿ ಮತ್ತು ಅವರ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಭದ್ರತೆ ನೀಡಬೇಕು ಮತ್ತು ಅವರಿಗೆ ಬಡ್ತಿ ನೀಡಿ ಗೌರವಿಸಬೇಕು ಎಂದು ಸಾರ್ವಜನಿಕರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
PublicNext
07/04/2026 10:02 pm