ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನೀಡಿರುವ ಹೊಸ ಎಚ್ಚರಿಕೆ ಜಗತ್ತನ್ನೇ ಆತಂಕಕ್ಕೆ ತಳ್ಳಿದೆ. "ಇಂದು ರಾತ್ರಿಯೇ ಇರಾನ್‌ನ ಇಡೀ ನಾಗರಿಕತೆ ಕೊನೆಯಾಗಲಿದೆ" ಎಂಬ ಟ್ರಂಪ್ ಅವರ ಹೇಳಿಕೆಯು ಅಣುಬಾಂಬ್ ದಾಳಿಯ ಮುನ್ಸೂಚನೆಯೇ ಎಂಬ ಚರ್ಚೆಗಳು ಆರಂಭವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಇರಾನ್‌ನೊಂದಿಗಿನ ಸಂಘರ್ಷವನ್ನು ಕೊನೆಗೊಳಿಸಲು ಟ್ರಂಪ್ ಇಂದು (ಏಪ್ರಿಲ್ 7) ರಾತ್ರಿ 8 ಗಂಟೆಯ (ಸ್ಥಳೀಯ ಕಾಲಮಾನ) ಗಡುವನ್ನು ವಿಧಿಸಿದ್ದಾರೆ. ಒಂದು ವೇಳೆ ಈ ಗಡುವಿನೊಳಗೆ ಇರಾನ್ ಮಾತುಕತೆಗೆ ಒಪ್ಪದಿದ್ದರೆ ಅಥವಾ 'ಹೋರ್ಮುಜ್ ಜಲಸಂಧಿ'ಯನ್ನು (Strait of Hormuz) ಮುಕ್ತಗೊಳಿಸದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಗುಡುಗಿದ್ದಾರೆ.
"ಇಂದು ರಾತ್ರಿ ಇಡೀ ನಾಗರಿಕತೆಯೇ ಸತ್ತು ಹೋಗಲಿದೆ, ಅದು ಮತ್ತೆ ಎಂದಿಗೂ ಮರಳದಂತೆ ನಾಶವಾಗಲಿದೆ. ಇದು ಸಂಭವಿಸುವುದು ನನಗೆ ಇಷ್ಟವಿಲ್ಲ, ಆದರೆ ಬಹುಶಃ ಅದು ನಡೆಯಲಿದೆ," ಎಂದು ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಬರೆದುಕೊಂಡಿದ್ದಾರೆ.
ಟ್ರಂಪ್ ಅವರ ಮಾಜಿ ಮತ್ತು ಹಾಲಿ ಸಲಹೆಗಾರರು 'ದ ಗಾರ್ಡಿಯನ್' ವರದಿಯ ಪ್ರಕಾರ, ಅಧ್ಯಕ್ಷರು ಇರಾನ್ ಮೇಲೆ ಅಣುಬಾಂಬ್ ಅಥವಾ ಅತಿ ವಿನಾಶಕಾರಿ ಕ್ಷಿಪಣಿ ದಾಳಿಗೆ ಆದೇಶಿಸಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರ ಈ ಬೆದರಿಕೆಯನ್ನು ಮಾರುಕಟ್ಟೆ ತಜ್ಞರು ಆರಂಭದಲ್ಲಿ ಕೇವಲ 'ಹುಸಿ ಬೆದರಿಕೆ' (Bluff) ಎಂದು ಪರಿಗಣಿಸಿದ್ದರು. ಹೀಗಾಗಿ S&P 500 ಸೂಚ್ಯಂಕ ಕೇವಲ 20 ಪಾಯಿಂಟ್‌ಗಳಷ್ಟು ಮಾತ್ರ ಕುಸಿತ ಕಂಡಿದೆ. ಒಂದು ವೇಳೆ ಇರಾನ್ ಬಗ್ಗದಿದ್ದರೆ ಅಲ್ಲಿನ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ರೈಲ್ವೆ ಸಂಪರ್ಕಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದಾಗಿ ಅಮೆರಿಕ ಎಚ್ಚರಿಸಿದೆ.
ಒಂದು ವೇಳೆ ಯುದ್ಧ ಘೋಷಣೆಯಾದರೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ ಮತ್ತು ಇದು ಮೂರನೇ ಮಹಾಯುದ್ಧಕ್ಕೆ ನಾಂದಿಯಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
PublicNext
07/04/2026 09:13 pm