ಬಳ್ಳಾರಿ: ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿ ಸಂಭವಿಸಿದ ಸಣ್ಣ ಬೆಂಕಿ ಅವಘಡ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ತಾಕಿ ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿವೆ.
ಸಿಲಿಂಡರ್ ಬ್ಲಾಸ್ಟ್ ಶಬ್ದಕ್ಕೆ ಎಚ್ಚೆತ್ತುಕೊಂಡ ಹೋಟೆಲ್‌ನಲ್ಲಿದ್ದ ಕುಟುಂಬಸ್ಥರು ತಕ್ಷಣ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಘಡ ಸಂಭವಿಸಿದ ಸಮಯದಲ್ಲಿ ಒಟ್ಟು 9 ಜನರು ಹೋಟೆಲ್‌ನಿಂದ ಹೊರಗೆ ದೌಡಾಯಿಸಿದ್ದು, ದೊಡ್ಡ ಅನಾಹುತ ತಪ್ಪಿದೆ.
ಆದರೆ ಶ್ರೀನಿವಾಸ (09) ಎಂಬ ಬಾಲಕನಿಗೆ ದೇಹದ ಹಲವೆಡೆ ಸುಟ್ಟು ಗಂಭೀರ ಗಾಯಗಳಾಗಿವೆ. ಶಬ್ದ ಕೇಳಿ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮೊದಲು ತೆಕ್ಕಲಕೋಟೆ ಪಿಎಚ್ಸಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಬಾಲಕನನ್ನು ಬಳ್ಳಾರಿ ಟ್ರಾಮಾ ಕೇರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಸಿದ್ದಪ್ಪ ಅವರು ತಮ್ಮ ಸ್ವಂತ ಕಾರಿನಲ್ಲಿ ಗಾಯಾಳುವನ್ನು ಬಳ್ಳಾರಿಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಈ ಸಂಬಂಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವರದಿ : ಹೊನ್ನುರಸ್ವಾಮಿ ಕೆ. ಟಿ ಬಳ್ಳಾರಿ.
PublicNext
23/04/2026 11:25 am
LOADING...