ಸಕಲೇಶಪುರ: ಭಾರತ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ 33% ಮೀಸಲಾತಿ ಕಲ್ಪಿಸುವ ಕನಸು ಹೊಂದಿದ್ದರು. ಆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿರುವುದನ್ನು ಬಿಜೆಪಿ ಮುಖಂಡರು ಸ್ವಾಗತಿಸಿದ್ದಾರೆ.
ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ತೀವ್ರ ಧಿಕ್ಕಾರ ವ್ಯಕ್ತಪಡಿಸಿದರು. “ಮಹಿಳೆಯರ ಪರವಾಗಿ ಮಾತನಾಡುವ ಕಾಂಗ್ರೆಸ್, ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಲು ವಿಫಲವಾಗಿದೆ,” ಎಂದು ಅವರು ಆರೋಪಿಸಿದರು.
ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಸುಮಾರು 70 ಕೋಟಿ ಮಹಿಳೆಯರಿರುವುದನ್ನು ಉಲ್ಲೇಖಿಸಿದ ಅವರು, ಮಹಿಳೆಯರಿಗೆ ಸಮರ್ಪಕ ಪ್ರತಿನಿಧಿತ್ವ ನೀಡುವುದು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು. “ಮಹಿಳೆಯರು ಅತಿ ಬುದ್ಧಿವಂತರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ರಾಜಕೀಯದಲ್ಲೂ ಅವರ ಪಾಲ್ಗೊಳ್ಳುವಿಕೆ ಹೆಚ್ಚಳವಾಗಬೇಕು ಎಂಬುದು ನಮ್ಮ ಉದ್ದೇಶ,” ಎಂದು ತಿಳಿಸಿದರು.
ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತಾವತಿ ಮಂಜುನಾಥ್, ಬಬಿತಾ ವಿಶ್ವನಾಥ್, ಪುರಸಭೆ ಮಾಜಿ ಸದಸ್ಯೆ ವನಜಾಕ್ಷಿ, ಸಕಲೇಶಪುರ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೊಮ್ಮನಕರೆ ಮಧು, ಅಗ್ನಿ ಸೋಮಶೇಖರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಶೇಷವಾಗಿ, ಶಾಸಕರ ಧರ್ಮಪತ್ನಿ ಪ್ರತಿಭಾ ಮಂಜುನಾಥ್ ಅವರು ಮಹಿಳೆಯರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
PublicNext
29/04/2026 02:45 pm