ಮುಂಬೈ: ಮುಂಬೈ ಮತ್ತು ಪುಣೆ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿರುವ ಯಶವಂತರಾವ್ ಚವಾಣ್ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಬಹುನಿರೀಕ್ಷಿತ 'ಮಿಸ್ಸಿಂಗ್ ಲಿಂಕ್' (Missing Link) ಮೇ 1ರ ಶುಕ್ರವಾರದಂದು ಲೋಕಾರ್ಪಣೆಗೊಳ್ಳಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ನೂತನ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.
ಕೇಂದ್ರ ಸಚಿವ ಮುರಳೀಧರ್ ಮೋಹೋಲ್ (ಮುಖ್ಯ ಅತಿಥಿ), ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂದೆ ಮತ್ತು ಸುನೇತ್ರಾ ಅಜಿತ್ ಪವಾರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ.
ಈ 'ಮಿಸ್ಸಿಂಗ್ ಲಿಂಕ್' ಯೋಜನೆಯು ಇಂಜಿನಿಯರಿಂಗ್ ಅದ್ಭುತವಾಗಿದ್ದು, ಪ್ರಯಾಣಿಕರಿಗೆ ಹಲವು ಅನುಕೂಲಗಳನ್ನು ಒದಗಿಸಲಿದೆ. ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಅವಧಿ ಸುಮಾರು 30 ನಿಮಿಷಗಳಷ್ಟು ಕಡಿಮೆಯಾಗಲಿದೆ. ಲೋನಾವಾಲಾ-ಖಂಡಾಲಾ ಘಾಟ್ ವಿಭಾಗವನ್ನು ಬೈಪಾಸ್ ಮಾಡುವುದರಿಂದ ಒಟ್ಟು ದೂರದಲ್ಲಿ 6 ಕಿಲೋಮೀಟರ್‌ಗಳಷ್ಟು ಇಳಿಕೆಯಾಗಲಿದೆ. ಈ 13.3 ಕಿ.ಮೀ ಉದ್ದದ ರಸ್ತೆಯಲ್ಲಿ ಸುಮಾರು 8.92 ಕಿ.ಮೀ ಉದ್ದದ ಸುರಂಗ ಮಾರ್ಗವಿದ್ದು, ಇದು ವಿಶ್ವದ ಅತಿ ಅಗಲದ (23.75 ಮೀಟರ್) ಸುರಂಗಗಳಲ್ಲಿ ಒಂದಾಗಿದೆ. ಟೈಗರ್ ವ್ಯಾಲಿಯಿಂದ ಸುಮಾರು 182 ಮೀಟರ್ ಎತ್ತರದಲ್ಲಿ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ, ಈ ರಸ್ತೆಯು ಲೋನಾವಾಲಾ ಕೆರೆಯಿಂದ 182 ಮೀಟರ್ ಆಳದಲ್ಲಿ ಹಾದುಹೋಗುತ್ತದೆ.
ಸಂಚಾರ ಪೊಲೀಸ್ ಅಧಿಸೂಚನೆಯಂತೆ, ಆರಂಭಿಕ ಹಂತದಲ್ಲಿ (ಮೇ 1 ರಿಂದ ಅಕ್ಟೋಬರ್ 31 ರವರೆಗೆ) ಕೆಲವು ನಿರ್ಬಂಧಗಳನ್ನು ಹೇರಲಾಗಿದೆ:
1. ಲಘು ವಾಹನಗಳು (LMV) ಮತ್ತು ಪ್ರಯಾಣಿಕ ಬಸ್‌ಗಳಿಗೆ ಮಾತ್ರ ಅವಕಾಶ.
2. ಸರಕು ಸಾಗಣೆ ವಾಹನಗಳಿಗೆ (Goods Vehicles)ಸದ್ಯಕ್ಕೆ ನಿರ್ಬಂಧ ಹೇರಲಾಗಿದೆ. ಆರು ತಿಂಗಳ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು.
3. ವೇಗದ ಮಿತಿ: ಕಾರುಗಳಿಗೆ ಗಂಟೆಗೆ 100 ಕಿ.ಮೀ ಮತ್ತು ಬಸ್‌ಗಳಿಗೆ ಗಂಟೆಗೆ 80 ಕಿ.ಮೀ ವೇಗ ನಿಗದಿಪಡಿಸಲಾಗಿದೆ.
2002ರಲ್ಲಿ ಆರಂಭವಾದ ಹಾಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರತಿದಿನ ಸುಮಾರು 75,000 ವಾಹನಗಳು ಸಂಚರಿಸುತ್ತವೆ. ವಾರಾಂತ್ಯದಲ್ಲಿ ಈ ಸಂಖ್ಯೆ 1.20 ಲಕ್ಷಕ್ಕೆ ಏರುವುದರಿಂದ ತೀವ್ರ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಘಾಟ್ ಪ್ರದೇಶದಲ್ಲಿ ಆಗಾಗ ಸಂಭವಿಸುವ ಅಪಘಾತಗಳು ಮತ್ತು ಟ್ಯಾಂಕರ್ ಉರುಳುವಂತಹ ಘಟನೆಗಳಿಂದ ರಸ್ತೆ ಗಂಟೆಗಟ್ಟಲೆ ಸ್ಥಗಿತಗೊಳ್ಳುತ್ತಿತ್ತು. ಹೊಸ 'ಮಿಸ್ಸಿಂಗ್ ಲಿಂಕ್' ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ನಿರೀಕ್ಷೆಯಿದೆ.
PublicNext
30/04/2026 04:12 pm