ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿ, ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಭಾರಿ ಮಳೆಯಿಂದ ಬೌರಿಂಗ್ ಆಸ್ಪತ್ರೆ ದುರಂತದ ಹಿನ್ನೆಲೆಯಲ್ಲಿ ಇಂದು ಸಿಎಂ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಬಿಎ ಆಯುಕ್ತರ ಸಭೆಯಲ್ಲಿ ಮಾತನಾಡಿದ ಸಿಎಂ ಅವರು, ಇದಕ್ಕೆ ಇಂಜಿನಿಯರ್ ಹೊಣೆಯಾಗಿದ್ದು, ಲೋಪ ಎಸಗಿದವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಆಯುಕ್ತರಿಗೆ ಸೂಚನೆ ನೀಡಿದರು ಎಂದು ಜಿಬಿಎ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದಿಂದ ನಿನ್ನೆ ಏಳು ಜನ ಮೃತಪಟ್ಟಿರುವ ಕುರಿತಂತೆ ಜಿಬಿಎ ಆಯುಕ್ತರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿಗಳು ಗೋಡೆಗೆ ಹಾನಿ ಆಗಲಿದೆ ಎಂದು ತಿಳಿದಿದ್ದರೂ ಕಾಮಗಾರಿ ನಡೆಯುವಾಗ ಮಣ್ಣು ಸುರಿದದ್ದು ಏಕೆ? ಎಂದು ಪ್ರಶ್ನಿಸಿದರು.
ಗೋಡೆಗೆ ಹಾನಿಯಾಗುವಂತೆ ಮಣ್ಣು ಸುರಿದದ್ದು ನೀವು ಏಕೆ ನೋಡಿಕೊಳ್ಳಲಿಲ್ಲ? ಎಂದು ಆಸ್ಪತ್ರೆ ಮುಖ್ಯಸ್ಥರನ್ನು ಸಿಎಂ ನೇರವಾಗಿ ಪ್ರಶ್ನಿಸಿದರು! ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್ ನೀಡಲು ಸೂಚಿಸಿದ ಮುಖ್ಯಮಂತ್ರಿಗಳು
ಬೆಂಗಳೂರಿನಲ್ಲಿ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ನಿನ್ನೆ ಬೆಂಗಳೂರಿನಲ್ಲಿ ಉಂಟಾದ ಮಳೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, 250 ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಏಳು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಸತ್ತವರ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಆಯುಕ್ತ ಮಹೇಶ್ವರ ರಾವ್ , ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಮೊದಲಾದವರು ಉಪಸ್ಥಿತರಿದ್ದರು.
PublicNext
30/04/2026 07:04 pm