ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎದೆ ನಡುಗಿಸುವ ಸಿಸಿಟಿವಿ ದೃಶ್ಯ: ವೇಗದ ಕಾರು ಬೈಕ್‌ಗೆ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ಮಿರ್ಯಾಲಗುಡ : ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗುಡ ಸಮೀಪದ ನಂದಿಪಾಡು ಚೌರಸ್ತಾದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತ್ಯುವಿನಂತೆ ಅತೀ ವೇಗವಾಗಿ ಬಂದ ಕಾರು ಸರಣಿ ಅಪಘಾತಕ್ಕೀಡಾಗಿ, ಬೈಕ್ ಸವಾರರೊಬ್ಬರ ಜೀವ ಬಲಿಪಡೆದಿದೆ. ಈ ದಾರುಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಎದೆ ನಡುಗಿಸುವಂತಿವೆ.

ಹೌದು ಬುಧವಾರ ಮಧ್ಯಾಹ್ನ ನಂದಿಪಾಡು ಚೌರಸ್ತಾದಲ್ಲಿ ಎಂದಿನಂತೆ ವಾಹನ ಸಂಚಾರವಿತ್ತು. ಈ ವೇಳೆ, ನಿಯಂತ್ರಣ ತಪ್ಪಿ ಅತೀ ವೇಗವಾಗಿ ಬಂದ ಕಾರೊಂದು ಮೊದಲು ಎದುರಿಗೆ ಬರುತ್ತಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಅಷ್ಟಕ್ಕೆ ನಿಲ್ಲದ ಕಾರು, ಪಕ್ಕದಲ್ಲೇ ಸಾಗುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೂ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.

ಈ ಭೀಕರ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ಕಾರು ಡಿಕ್ಕಿ ಹೊಡೆದ ತಕ್ಷಣ ಬೈಕ್ ಸವಾರರು ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಈ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಾಹನ ಸವಾರರಲ್ಲಿ ಆತಂಕ ಮತ್ತು ಎಚ್ಚರಿಕೆ ಮೂಡಿಸಿವೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Edited By : Nirmala Aralikatti
PublicNext

PublicNext

30/04/2026 03:18 pm

Cinque Terre

48.04 K

Cinque Terre

0

ಸಂಬಂಧಿತ ಸುದ್ದಿ