ಊನಾ (ಹಿಮಾಚಲ ಪ್ರದೇಶ): ದೇವರ ದರ್ಶನ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಭಕ್ತರಿಗೆ ಹಾದಿಯಲ್ಲೇ ಸಾವು ಕಾದಿತ್ತು. ಹಿಮಾಚಲ ಪ್ರದೇಶದ ಊನಾ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲೂಧಿಯಾನ ಮೂಲದ ಇಬ್ಬರು ಭಕ್ತರು ಪ್ರಯಾಣಿಸುತ್ತಿದ್ದ ಕಾರು ಸುಮಾರು 200 ಅಡಿ ಆಳದ ಪ್ರಪಾತಕ್ಕೆ ಉರುಳಿ, ಬೆಂಕಿಗೆ ಆಹುತಿಯಾಗಿ, ಅದರಲ್ಲಿದ್ದ ಇಬ್ಬರು ಭಕ್ತರು ಸಜೀವ ದಹನವಾಗಿದ್ದಾರೆ.
ಹೌದು ಪಂಜಾಬ್‌ನ ಲೂಧಿಯಾನಕ್ಕೆ ಮರಳುತ್ತಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು (PB-10-K-7531), ಹಿಮಾಚಲದ ಸುಪ್ರಸಿದ್ಧ ಚಿಂತಪೂರ್ಣಿ ದೇವಸ್ಥಾನದಲ್ಲಿ ದರ್ಶನ ಮುಗಿಸಿಕೊಂಡು ಬರುತ್ತಿತ್ತು. ಭರ್ವೈನ್-ಹೋಶಿಯಾರ್‌ಪುರ ರಸ್ತೆಯ ಅತ್ಯಂತ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು 200 ಅಡಿ ಆಳದ ಪ್ರಪಾತಕ್ಕೆ ವೇಗವಾಗಿ ಉರುಳಿದೆ.
ಇನ್ನೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ಪ್ರಕಾರ, ಕಾರು ತಿರುವಿನಲ್ಲಿ ತಿರುಗದೆ ನೇರವಾಗಿ ಪ್ರಪಾತದ ಅಂಚಿಗೆ ನುಗ್ಗಿದೆ. ಪ್ರಪಾತಕ್ಕೆ ಬೀಳುವ ಮೊದಲೇ ಕಾರಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಪ್ರಪಾತಕ್ಕೆ ಬಿದ್ದ ತಕ್ಷಣವೇ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಹೊರಬರಲಾಗದೆ ಬೆಂಕಿಗೆ ಆಹುತಿಯಾಗಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಕಾರು ಚಲಿಸುತ್ತಿದ್ದಂತೆಯೇ ಟೈರ್ ಸ್ಫೋಟಗೊಂಡ ಭಾರಿ ಸದ್ದು ಕೇಳಿಸಿದೆ. ಟೈರ್ ಸ್ಫೋಟಗೊಂಡ ಪರಿಣಾಮವಾಗಿ ಚಾಲಕನಿಗೆ ನಿಯಂತ್ರಣ ಕಳೆದುಹೋಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅಪಘಾತ ಸಂಭವಿಸಿದ ಈ ಸ್ಥಳವು ಅತ್ಯಂತ ಅಪಾಯಕಾರಿ 'ಬ್ಲ್ಯಾಕ್ ಸ್ಪಾಟ್' ಎಂದು ಗುರುತಿಸಲ್ಪಟ್ಟಿದೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ವೇಳೆಗೆ ಕಾರು ಸಂಪೂರ್ಣವಾಗಿ ಸುಟ್ಟು ಅಸ್ಥಿಪಂಜರದಂತಾಗಿತ್ತು. ಕಾರಿನೊಳಗೆ ಒಂದು ಮೃತದೇಹ ಪತ್ತೆಯಾಗಿದ್ದು, ಮತ್ತೊಂದು ಮೃತದೇಹ ಕಾರಿನ ಹೊರಗೆ ಬಿದ್ದಿತ್ತು. ಕಾರಿನಲ್ಲಿ ದೊರೆತ ಆಧಾರ್ ಕಾರ್ಡ್ ಆಧಾರದ ಮೇಲೆ ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಹಿಮಾಚಲ ಪ್ರದೇಶದಂತಹ ಕಡಿದಾದ ಮತ್ತು ಅಪಾಯಕಾರಿ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಚಾಲಕರು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
PublicNext
30/04/2026 04:58 pm