ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಕರಿಷ್ಮಾ ಕಪೂರ್ ಮಕ್ಕಳಿಗೆ ಮಧ್ಯಂತರ ಪರಿಹಾರ - ಸಂಜಯ್ ಕಪೂರ್ ಆಸ್ತಿಗಳ ಮಾರಾಟಕ್ಕೆ ತಡೆಯಾಜ್ಞೆ

ನವದೆಹಲಿ: ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳಿಗೆ ದಿಲ್ಲಿ ಹೈಕೋರ್ಟ್ ಮಹತ್ವದ ಮಧ್ಯಂತರ ರಿಲೀಫ್ ನೀಡಿದೆ. ಸಂಜಯ್ ಕಪೂರ್ ಅವರ ಬ್ಯಾಂಕ್ ಖಾತೆಗಳು ಮತ್ತು ವಿದೇಶಗಳಲ್ಲಿನ ಕ್ರಿಪ್ಟೋಕರೆನ್ಸಿ ಸಂಪತ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಗುರುವಾರ ನ್ಯಾಯಾಲಯ ಆದೇಶಿಸಿದೆ. ಸಂಜಯ್ ಕಪೂರ್ ಎಸ್ಟೇಟ್ ವಿವಾದದಲ್ಲಿ ಮಧ್ಯಂತರ ಪರಿಹಾರ ಕೋರಿ ಕರಿಷ್ಮಾ ಅವರ ಮಕ್ಕಳಾದ ಕಿಯಾನ್ ಮತ್ತು ಸಮೈರಾ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಆಸ್ತಿಗಳನ್ನು ಸಂರಕ್ಷಿಸುವಂತೆ ಸೂಚಿಸಿದೆ. ಇದೇ ವೇಳೆ, ಈ ಆಸ್ತಿಗಳನ್ನು ಮಾರಾಟ ಮಾಡಬಾರದು, ಹಂಚಿಕೆ ಮಾಡಬಾರದು ಅಥವಾ ಯಾರಿಗೂ ವರ್ಗಾವಣೆ ಮಾಡಬಾರದು ಎಂದು ಸ್ಪಷ್ಟವಾಗಿ ತಡೆಯಾಜ್ಞೆ ನೀಡಿದೆ.

ಕಳೆದ ವರ್ಷ ಜೂನ್‌ನಲ್ಲಿ ಲಂಡನ್‌ನಲ್ಲಿ ನಿಧನರಾದ ಸಂಜಯ್ ಕಪೂರ್ ಅವರು ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಬೃಹತ್ ಆಸ್ತಿಯನ್ನು ಬಿಟ್ಟುಹೋಗಿದ್ದಾರೆ. ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ ಕಪೂರ್ ಹಾಗೂ ಕರಿಷ್ಮಾ ಕಪೂರ್ ಅವರ ಎರಡನೇ ವಿವಾಹದಿಂದ ಜನಿಸಿದ ಮಕ್ಕಳಾದ ಕಿಯಾನ್ ಮತ್ತು ಸಮೈರಾ ನಡುವೆ ಈ ಆಸ್ತಿಯ ಹಕ್ಕಿನ ಕುರಿತಾಗಿ ತೀವ್ರ ವಿವಾದ ಉಂಟಾಗಿದೆ.

ಕಿಯಾನ್ ಮತ್ತು ಸಮೈರಾ ಅವರು, ಪ್ರಿಯಾ ಕಪೂರ್ ಸಂಜಯ್ ಕಪೂರ್ ಹೆಸರಿನಲ್ಲಿ ನಕಲಿ ವಿಲ್ ಸೃಷ್ಟಿಸಿದ್ದಾರೆ ಮತ್ತು ಆಸ್ತಿಗಳ ಸಂಪೂರ್ಣ ವಿವರವನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದ್ದಾರೆ. ದುಬಾರಿ ಪೋಲೋ ಕುದುರೆಗಳು ಹಾಗೂ ಆಡೆಮರ್ಸ್ ಪಿಗುಯೆಟ್, ರೋಲೆಕ್ಸ್ ಸೇರಿದಂತೆ ಹಲವು ಐಷಾರಾಮಿ ಕೈಗಡಿಯಾರಗಳನ್ನು ಆಸ್ತಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅವರು ದೂರಿದ್ದಾರೆ. ಕರಿಷ್ಮಾ ಕಪೂರ್ ಅವರ ಮಕ್ಕಳು ತಮ್ಮ ಆರೋಪಗಳಿಗೆ ಪ್ರಾಥಮಿಕವಾಗಿ ಸಾಕ್ಷ್ಯ ಒದಗಿಸಿದ್ದಾರೆ ಎಂದು ಗಮನಿಸಿದ ನ್ಯಾಯಾಲಯ, ವಿಲ್‌ನ ಸತ್ಯಾಸತ್ಯತೆಯ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸುವ ಹೊಣೆಗಾರಿಕೆ ಪ್ರಿಯಾ ಕಪೂರ್ ಮೇಲಿದೆ ಎಂದು ಸ್ಪಷ್ಟಪಡಿಸಿದೆ.

Edited By : Nagaraj Tulugeri
PublicNext

PublicNext

30/04/2026 08:48 pm

Cinque Terre

9.65 K

Cinque Terre

0

ಸಂಬಂಧಿತ ಸುದ್ದಿ