ಕೊಪ್ಪಳ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ತೀರ್ಪು ಹೊರಬಿದ್ದಿದೆ. ಪ್ರಕರಣದ ಪ್ರಮುಖ ಆರೋಪಿ ರವಿ ಸೇರಿದಂತೆ ಒಟ್ಟು ಆರು ಮಂದಿ ಹಂತಕರಿಗೆ ಗಲ್ಲು ಶಿಕ್ಷೆ (Death Penalty) ವಿಧಿಸಿ ಗಂಗಾವತಿಯ ನ್ಯಾಯಾಲಯ ಐತಿಹಾಸಿಕ ಆದೇಶ ನೀಡಿದೆ.
ಹೌದು ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದರು. ಕೊಲೆ ಆರೋಪಿಗಳಾದ ರವಿ, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮ್ ಅಲಿಯಾಸ್ ಭರತ್, ಸಲೀಂ ಮತ್ತು ಗಂಗಾಧರ ಗೌಳಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆಯ ಜೊತೆಗೆ, ಪ್ರತಿಯೊಬ್ಬ ಅಪರಾಧಿಗೂ ತಲಾ 3 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದ್ದು, ಈ ಹಣವನ್ನು ಸಂತ್ರಸ್ತ ವೆಂಕಟೇಶ್ ಕುರುಬರ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಕಳೆದ 2025ರ ಅಕ್ಟೋಬರ್ 7 ಮತ್ತು 8 ರ ಮಧ್ಯರಾತ್ರಿ ಗಂಗಾವತಿಯಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣವು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಹಂತಕರು ಪೂರ್ವಯೋಜಿತ ಸಂಚು ರೂಪಿಸಿ ವೆಂಕಟೇಶ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗಂಗಾವತಿ ನಗರ ಪೊಲೀಸರು, ತಕ್ಷಣವೇ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ರವಿ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಿದ್ದರು.
ಗಂಗಾವತಿ ನಗರ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರು. ತನಿಖೆ ನಡೆಸಿದ ಅಧಿಕಾರಿಗಳು ಸುಮಾರು 927 ಪುಟಗಳ ಬೃಹತ್ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಘಟನೆಯ ಕುರಿತು ಸಾಕ್ಷ್ಯಾಧಾರಗಳು ಮತ್ತು ತಾಂತ್ರಿಕ ದಾಖಲೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದ್ದು, ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗಲು ಇದು ಪ್ರಮುಖ ಕಾರಣವಾಯಿತು.
ಈ ಕೊಲೆ ಪ್ರಕರಣದಲ್ಲಿ ಒಟ್ಟು 12 ಜನರ ಮೇಲೆ ಆರೋಪ ಹೊರಿಸಲಾಗಿತ್ತು. ಆದರೆ, ಏಪ್ರಿಲ್ 23 ರಂದು ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಕಾರ್ತಿಕ್, ದಾದಪೀರ್, ಮಹಮ್ಮದ್ ಅಲ್ತಾಪ್, ಮಲ್ಲಿಕಾರ್ಜುನ, ಹರ್ತೋಟಿ ಶರಣ ಮತ್ತು ಚೈತ್ರಾ ಎಂಬುವವರನ್ನು ನಿರ್ದೋಷಿಗಳೆಂದು ಘೋಷಿಸಿತು. ಉಳಿದ ಆರು ಮಂದಿ ದೋಷಿಗಳು ಎಂದು ತೀರ್ಪು ನೀಡಿದ ನ್ಯಾಯಾಲಯ, ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಗಂಗಾವತಿ ನ್ಯಾಯಾಲಯದ ಆವರಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಿಕ್ಷೆಗೊಳಗಾದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಎರಡು ಪ್ರತ್ಯೇಕ ವ್ಯಾನ್‌ಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರು ತೀರ್ಪು ಓದುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವೆಂಕಟೇಶ್ ಕುರುಬರ ಕುಟುಂಬಕ್ಕೆ ಕೊನೆಗೂ ನ್ಯಾಯ ದೊರೆತಿದ್ದು, ನ್ಯಾಯಾಲಯದ ಈ ಕಠಿಣ ತೀರ್ಪು ಸಮಾಜಕ್ಕೆ ಪ್ರಬಲ ಸಂದೇಶ ರವಾನಿಸಿದೆ.
PublicNext
30/04/2026 04:50 pm