ನವದೆಹಲಿ: ಅಸ್ಸಾಂ ಪೊಲೀಸರು ದಾಖಲಿಸಿದ್ದ ಮಾನನಷ್ಟ ಮತ್ತು ಫೋರ್ಜರಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ರಿಲೀಫ್ ದೊರೆತಿದೆ. ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಇದರೊಂದಿಗೆ ಖೇರಾ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಏಪ್ರಿಲ್ 24ರಂದು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್, ಗುವಾಹಟಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವ ಮೂಲಕ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಿದೆ.
ಈ ಪ್ರಕರಣವು ರಾಜಕೀಯ ದ್ವೇಷದಿಂದ ಕೂಡಿದೆ ಎಂದು ನ್ಯಾ.ಜೆ.ಕೆ. ಮಹೇಶ್ವರಿ ಹಾಗೂ ನ್ಯಾ.ಅತುಲ್ ಚಂದೂರ್ಕರ್ ಅವರ ಪೀಠ ಅಭಿಪ್ರಾಯಪಟ್ಟಿದೆ. ಆರೋಪಿಯು ತನಿಖೆಗೆ ಸಹಕರಿಸುತ್ತಿರುವಾಗ ಬಂಧನದ ಅಗತ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ರಾಜಕೀಯ ಪೈಪೋಟಿಯಿಂದ ಪ್ರೇರಿತವಾದ ಪ್ರಕರಣಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಹಗುರವಾಗಿ ಪರಿಗಣಿಸಲು ಅಥವಾ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ತೀಕ್ಷ್ಣವಾಗಿ ನುಡಿದಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಂಕಿ ಭುಯಾನ್ ಶರ್ಮಾ ಅವರು ಪವನ್ ಖೇರಾ ವಿರುದ್ಧ ಮಾನನಷ್ಟ ಮತ್ತು ದಾಖಲೆಗಳ ದುರುಪಯೋಗದ (ಫೋರ್ಜರಿ) ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಖೇರಾ ಅವರು ಸಾರ್ವಜನಿಕವಾಗಿ ನೀಡಿದ ಹೇಳಿಕೆಗಳು ಮತ್ತು ಸಲ್ಲಿಕೆಯಾದ ದಾಖಲೆಗಳು ನಕಲಿ ಎಂಬ ಆರೋಪದ ಮೇಲೆ ಅಸ್ಸಾಂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಈ ಹಿಂದೆ, ಏಪ್ರಿಲ್ 15ರಂದು ತೆಲಂಗಾಣ ಹೈಕೋರ್ಟ್ ನೀಡಿದ್ದ ಮಧ್ಯಂತರ ರಕ್ಷಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ, ಗುವಾಹಟಿ ಹೈಕೋರ್ಟ್ ಸಂಪರ್ಕಿಸಲು ಸೂಚಿಸಿತ್ತು. ಆದರೆ ಏಪ್ರಿಲ್ 24ರಂದು ಗುವಾಹಟಿ ಹೈಕೋರ್ಟ್ ಜಾಮೀನು ನಿರಾಕರಿಸಿದ ನಂತರ, ಖೇರಾ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
PublicNext
01/05/2026 02:37 pm