ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಮಾತು ಮುನ್ನೆಲೆಗೆ ಬಂದಾಗ ಮತ್ತು ಈಗಿರುವ ಕೆಲ ಸಚಿವರನ್ನು ಸಿಎಂ ಸಿದ್ದರಾಮಯ್ಯನವರ ಸಂಪುಟದಿಂದ ಕೈ ಬಿಡಲಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿರೋವಾಗ, ಎಪಿಎಂಸಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಸಚಿವ ಸ್ಥಾನವನ್ನು ಬಿಟ್ಟು ಕೊಡಿ ಎಂದರೆ ನಾನು ಅದಕ್ಕೆ ಸಿದ್ಧನಿದ್ದೇನೆ ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ!
ನಾನೇನು ದೆಹಲಿಗೆ ಹೋಗಿ ಬೆನ್ನು ಹತ್ತಿ ಮಂತ್ರಿಯಾದವನಲ್ಲ. ನಾನು ನಾಲ್ಕು ಬಾರಿ ಶಾಸಕನಾದ ಮೇಲೆ ಈ ಹಿಂದೆ ಆರೋಗ್ಯ ಮಂತ್ರಿಯಾಗಿದ್ದೆನು. ಆವಾಗಲೂ ನಾನು ನನ್ನನ್ನು ಮಂತ್ರಿ ಮಾಡಿ ಅಂತಾ ಯಾರನ್ನೂ ಕೇಳಿದವನೇ ಅಲ್ಲ. ಕರೆದು ಮಂತ್ರಿಗಿರಿ ಕೊಟ್ಟಿದ್ದಾರೆ. ಆದರೆ, ಮಂತ್ರಿಯಾಗುವ ಮುನ್ನ ನಾನು ಶಾಸಕನಾಗಿ ಇಪ್ಪತ್ತು ವರ್ಷಗಳ ಕಾಲಸುಮ್ಮನಿದ್ದಂಥವನು. ಯಾರಿಗಾದರೂ ಸ್ವಲ್ಪ ತಾಳ್ಮೆ ಬೇಕು. ಐದನೇ ಬಾರಿ ಶಾಸಕನಾದ ಮೇಲೂ 2023ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ನನ್ನನ್ನು ಕರೆದು ಸಚಿವ ಸ್ಥಾನವನ್ನು ನೀಡಿದರು. ಈಗಲೂ ಕೂಡ ನಿಮ್ಮ ಸಚಿವ ಸ್ಥಾನವನ್ನು ಬಿಟ್ಟು ಕೊಡಿ ಎಂದರೆ ಮರು ಮಾತನಾಡದೇ ಹಾಗೇ ಮಾಡುವೆ..
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಚಿವ ಸ್ಥಾನವನ್ನು ಬೇರೊಬ್ಬ ಶಾಸಕರಿಗೆ ಬಿಟ್ಟು ಕೊಡಲು ಸಿದ್ಧ ಎಂದು ಪುನರ್ ಉಚ್ಚರಿಸಿದರು. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಸಚಿವ ಶಿವಾನಂದ ಪಾಟೀಲ್ ಅವರು, 1994ರಿಂದ ಇಲ್ಲಿಯವರೆಗೆ ಎಪಿಎಂಸಿ ಇಲಾಖೆಗೆ ಸಂಬಂಧಿಸಿದ ಕೆಲ ವ್ಯಾಜ್ಯಗಳಲ್ಲಿ ನಮಗೆ ಗೆಲುವಾಗಿದ್ದು, ಬೆಂಗಳೂರೊಂದರಲ್ಲೇ 312 ಎಕರೆಯಷ್ಟು ಜಾಗ ದೊರೆತಿದೆ ಎಂದರು.
PublicNext
02/05/2026 05:53 pm