ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಬೆಳಿಗ್ಗೆಯಿಂದ ನಡೆಯುತ್ತಿರುವ ಕಾರ್ಯ ಸಂಜೆಯಾದರೂ (7.10pm) ಆದರೂ ಮುಕ್ತಾಯಗೊಂಡಿಲ್ಲ. ಈ ಹಿಂದಿನ ಮಾಹಿತಿಯಂತೆ ಫಲಿತಾಂಶದಲ್ಲಿ ಯಾವುದೇ ಗಣನೀಯ ಬದಲಾವಣೆ ಇಲ್ಲ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ರಾಜೇಗೌಡ ಅವರ ಪರವಾಗಿ ಈಗಾಗಲೇ ಸಂಭ್ರಮಾಚರಣೆ ನಡೆಸಿದ್ದಾರೆ.
2023ರ ಚುನಾವಣೆಯ ಫಲಿತಾಂಶದ ಪ್ರಕಾರ 1822 ಒಟ್ಟು ಅಂಚೆ ಮತಗಳು ಚಲಾವಣೆಗೊಂಡಿದ್ದವು ಆ ಪೈಕಿ 279 ಮತಗಳು ತಿರಸ್ಕೃತಗೊಂಡಿದ್ದರೆ, 3 ನೋಟಾ ಮತಗಳು ಚಲಾವಣೆಯಾಗಿದ್ದರೆ. 1540 ಮತಗಳು ಅಧಿಕೃತವಾಗಿ ಮಾನ್ಯ ಪಡೆದಿದ್ದವು. ಇಂದು ನಡೆಯುತ್ತಿರುವ ಎಣಿಕೆ ಕಾರ್ಯದಲ್ಲಿ ಇತ್ತೀಚಿನ ಮಾಹಿತಿಯಂತೆ 1540 ಮತಗಳಲ್ಲಿ ಸಾಕಷ್ಟು ಮತಗಳು ತಿರಸ್ಕೃತಗೊಂಡಿವೆ ಎನ್ನಲಾಗುತ್ತಿದ್ದು. ಆದರೆ, ಅಂತಿಮ ಹಂತದಲ್ಲಿ ಚುನಾವಣಾ ಅಧಿಕಾರಿಗಳು ಶಾಸಕರನ್ನು ಮತ್ತೆ ಎಣಿಕೆ ಕೇಂದ್ರದ ಒಳಕ್ಕೆ ಕರೆಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ರಾಜೇಗೌಡ ಮತಗಳು ತಿರಸ್ಕೃತಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು ಸದ್ಯಕ್ಕೆ ಮತ ಎಣಿಕೆಯನ್ನು ನಿಲ್ಲಿಸಲಾಗಿದೆ.
ಎಣಿಕೆ ಕಾರ್ಯದಲ್ಲಿ ಗೊಂದಲ ಮುಂದುವರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಅವರು ದೊಡ್ಡ ಮಟ್ಟದ ಏರುಪೇರು ಸಂಭವಿಸದು ಎಂದು ಹೇಳಿಕೆ ನೀಡಿದ್ದರೂ, ಎಣಿಕೆ ವಿಳಂಬವಾಗುತ್ತಿರುವುದು ಎರಡೂ ಪಕ್ಷಗಳ ಅಭ್ಯರ್ಥಿಗಳಲ್ಲಿ ಮತ್ತು ಬೆಂಬಲಿಗರಲ್ಲಿ ಅಂತಿಮ ಕ್ಷಣದ ತಳಮಳ ಸೃಷ್ಟಿಯಾಗಿದೆ.
PublicNext
02/05/2026 07:14 pm