ಮಧುರೈ : ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಗವಾನ್ ಕಲ್ಲಳಗರ್ ವೈಗೈ ನದಿಗೆ ಇಳಿಯುತ್ತಿದ್ದಂತೆ, ತಮಿಳುನಾಡು ಭಕ್ತಿಯ ಪರವಶತೆಯಲ್ಲಿ ಮುಳುಗಿತು. ಹೌದು ಇಂದು ತಮಿಳುನಾಡಿನ ಸುಪ್ರಸಿದ್ಧ ಸಾಂಸ್ಕೃತಿಕ ಉತ್ಸವ 'ಮಧುರೈ ಚಿತ್ತಿರೈ' ಹಬ್ಬವು ತನ್ನ ಪರಮೋಚ್ಚ ಘಟ್ಟವನ್ನು ತಲುಪಿತು. ಈ ಸಂಪ್ರದಾಯದ ಅತಿ ಪ್ರಮುಖ ವಿಧಿಯಾದ ಭಗವಾನ್ ಕಲ್ಲಳಗರ್ (ವಿಷ್ಣುವಿನ ರೂಪ) ವೈಗೈ ನದಿಗೆ ಇಳಿಯುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಮಧುರೈನಲ್ಲಿರುವ ನದಿಯ ದಂಡೆಯ ಮೇಲೆ ಜಮಾಯಿಸಿದ್ದರು.
ಅಳಗರ್ ಕೋವಿಲ್‌ನಿಂದ ಚಿನ್ನದ ಕುದುರೆಯನ್ನೇರಿ ಆಗಮಿಸುವ ಭಗವಾನ್ ಕಲ್ಲಳಗರ್, ತಮ್ಮ ಸಹೋದರಿ ಮೀನಾಕ್ಷಿ ಅಮ್ಮನವರ ದಿವ್ಯ ವಿವಾಹ ಮಹೋತ್ಸವಕ್ಕೆ ಆಗಮಿಸಿ, ಅಂತಿಮವಾಗಿ ವೈಗೈ ನದಿಯನ್ನು ಪ್ರವೇಶಿಸುತ್ತಾರೆ ಎಂಬುದು ಈ ಐತಿಹಾಸಿಕ ಆಚರಣೆಯ ಹಿನ್ನೆಲೆ. ಹಸಿರು ಪಟ್ಟೆ ಉಟ್ಟು, ಆಭರಣಗಳಿಂದ ಅಲಂಕೃತಗೊಂಡಿದ್ದ ಸ್ವಾಮಿಯ ವಿಗ್ರಹವು ನದಿಗೆ ಇಳಿಯುತ್ತಿದ್ದಂತೆ, ನೆರೆದಿದ್ದ ಲಕ್ಷಾಂತರ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ವೈಗೈ ನದಿಯ ದಂಡೆ, ಆಳ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ಭಕ್ತಿಯ ಪರವಶತೆಯಲ್ಲಿ ಮುಳುಗಿದ್ದ ಭಕ್ತರು ಸ್ವಾಮಿಯ ಮೇಲೆ ನೀರನ್ನು ಚಿಮುಕಿಸಿ (ಜಲ ಅಭಿಷೇಕ) ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಈ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳಲು ತಮಿಳುನಾಡಿನ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ, ನೆರೆರಾಜ್ಯಗಳಿಂದಲೂ ಸಾವಿರಾರು ಜನರು ಆಗಮಿಸಿದ್ದರು.
ಲಕ್ಷಾಂತರ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮಧುರೈ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದರು. ನದಿ ದಂಡೆಯುದ್ದಕ್ಕೂ ಡ್ರೋನ್ ಮೂಲಕ ನಿರಂತರ ನಿಗಾ ಇರಿಸಲಾಗಿತ್ತು.
ಶೈವ ಮತ್ತು ವೈಷ್ಣವ ಪಂಥಗಳ ಸಮ್ಮಿಲನವನ್ನು ಸಾರುವ ಈ ಚಿತ್ತಿರೈ ಉತ್ಸವವು ಮಧುರೈನ ಹೆಮ್ಮೆಯ ಸಂಕೇತವಾಗಿದೆ. ಇಂದಿನ ಭಗವಾನ್ ಕಲ್ಲಳಗರ್ ನದಿ ಪ್ರವೇಶದೊಂದಿಗೆ, ಈ ವರ್ಷದ ಹಬ್ಬವು ಅತ್ಯಂತ ಯಶಸ್ವಿಯಾಗಿ ಮತ್ತು ಅದ್ಧೂರಿಯಾಗಿ ಸಂಪನ್ನಗೊಂಡಿದೆ.
PublicNext
01/05/2026 02:48 pm