ಉಜ್ಜಯಿನಿ: ಮಧ್ಯಪ್ರದೇಶದ ಪವಿತ್ರ ಭೂಮಿ ಉಜ್ಜಯಿನಿಯಲ್ಲಿ ಭಕ್ತರನ್ನು ಪುಳಕಿತಗೊಳಿಸುವಂತಹ ಅದ್ಭುತ ಘಟನೆಯೊಂದು ನಡೆದಿದೆ. 2028ರ ಸಿಂಹಸ್ಥ ಕುಂಭಮೇಳದ ಪೂರ್ವಸಿದ್ಧತೆಗಾಗಿ ಮಹಾಕಾಲೇಶ್ವರ ದೇವಾಲಯದ ವಿಸ್ತರಣಾ ಕಾಮಗಾರಿ ನಡೆಯುತ್ತಿದ್ದಾಗ, ಭಸ್ಮ ಆರತಿಯ ಶುಭ ಸಂದರ್ಭದಲ್ಲೇ ಭೂಗರ್ಭದಿಂದ ಬೃಹತ್ ಶಿವಲಿಂಗವೊಂದು ಪತ್ತೆಯಾಗಿದೆ.
ಹೌದು ದೇವಸ್ಥಾನದ ಒಳಭಾಗದಲ್ಲಿ ಪರಶಿವನಿಗೆ ಪವಿತ್ರ 'ಭಸ್ಮ ಆರತಿ' ನಡೆಯುತ್ತಿದ್ದ ಪುಣ್ಯಕಾಲದಲ್ಲೇ, ಹೊರಭಾಗದ ಭೂಮಿಯಲ್ಲಿ ಶಿವಲಿಂಗವು ಗೋಚರಿಸಿದೆ. ಈ ವಿಸ್ಮಯಕಾರಿ ಘಟನೆ ಭಕ್ತರಲ್ಲಿ ಅತೀವ ಕುತೂಹಲ ಹಾಗೂ ಭಕ್ತಿಭಾವ ಮೂಡಿಸಿದೆ. ದೇವಾಲಯದ ಅರ್ಚಕರಾದ ಆಕಾಶ್ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿ, "ಇಂದು ದೇವಸ್ಥಾನದ ಆವರಣದಲ್ಲಿ ಉತ್ಖನನ ನಡೆಯುತ್ತಿದ್ದಾಗ, ಭಸ್ಮ ಆರತಿಯ ಪುಣ್ಯಕಾಲದಲ್ಲೇ ಈ ಶಿವಲಿಂಗವು ಪತ್ತೆಯಾಗಿದೆ. ಇದು ಅತ್ಯಂತ ಮಂಗಳಕರ ಸಂಕೇತವಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಶಿವಲಿಂಗ ಪತ್ತೆಯಾದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ಸಾವಿರಾರು ಭಕ್ತರು ಸ್ಥಳಕ್ಕೆ ಧಾವಿಸಿದರು. ದೈವದ ಈ ಅಪರೂಪದ ದರ್ಶನವನ್ನು ಕಂಡ ಭಕ್ತರು 'ಹರ ಹರ ಮಹಾದೇವ್' ಘೋಷಣೆಗಳೊಂದಿಗೆ ಪುನೀತರಾದರು. ಅಲ್ಲದೆ, ಸ್ಥಳದಲ್ಲೇ ಶಿವಲಿಂಗಕ್ಕೆ ಭಕ್ತಿಯಿಂದ ಜಲಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳು ಕಂಡುಬಂದವು.
ಸಿಂಹಸ್ಥ 2028ರ ಸಿದ್ಧತೆಗಾಗಿ ಭಾರೀ ಯಂತ್ರೋಪಕರಣಗಳನ್ನು ಬಳಸಿ ಭೂಮಿಯನ್ನು ಸಮತಟ್ಟು ಮಾಡುತ್ತಿದ್ದಾಗ ಈ ಶಿವಲಿಂಗವು ಪತ್ತೆಯಾಗಿದೆ. ಈ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯದಾದ ದೇವಾಲಯದ ಅವಶೇಷಗಳು ಪತ್ತೆಯಾಗಿದ್ದವು. ಸದ್ಯ ಪತ್ತೆಯಾಗಿರುವ ಈ ಲಿಂಗವು ಎಷ್ಟು ಪುರಾತನವಾದುದು ಎಂಬುದರ ಬಗ್ಗೆ ಸಂಶೋಧನೆ ನಡೆಸಲು ಪುರಾತತ್ವ ಇಲಾಖೆಗೆ ಸೂಚನೆ ನೀಡಲಾಗಿದೆ.
ಮಹಾಪರ್ವದ ಸಿದ್ಧತೆಯ ನಡುವೆಯೇ ಸಾಕ್ಷಾತ್ ಮಹಾಕಾಲನು ಈ ರೂಪದಲ್ಲಿ ದರ್ಶನ ನೀಡಿರುವುದು ದೈವ ಸಂಕಲ್ಪವೇ ಸರಿ ಎಂದು ಉಜ್ಜಯಿನಿಯ ಜನರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
PublicNext
01/05/2026 02:51 pm