ಬೆಂಗಳೂರು: ಬಾಲ್ಯದ ದಿನಗಳಿಂದಲೂ ಒಂದು ತುತ್ತು ಅನ್ನಕ್ಕೂ ಕಣ್ ಕಣ್ ಬಿಡುವಂತವರನ್ನು ನೋಡಿಕೊಂಡೇ ಬೆಳೆದ ಮತ್ತು ಹಸಿವಿನ ನೋವು ಎಂಥದ್ದು? ಎಂಬುದನ್ನು ಸ್ವತಃ ಅನುಭವಿಸಿದವರಾದ ಸಿಎಂ ಸಿದ್ದರಾಮಯ್ಯ ಅವರಿಗೆ ಮುಂದೆ 'ಗ್ಯಾರಂಟಿ' ಯೋಜನೆಗಳಲ್ಲೊಂದಾದ 'ಅನ್ನಭಾಗ್ಯ'ಕ್ಕೆ ಪ್ರೇರಣೆಯಾದಂತೆ, ಇತ್ತ ಸಿದ್ದರಾಮಯ್ಯನವರ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೂ ಅಂದು ಅವರ ತಂದೆಯವರ ಸಾವೇ ಇಂದು 'ಗೃಹ ಆರೋಗ್ಯ'ವೆಂಬ ನೂತನ ಯೋಜನೆಗೆ ಪ್ರೇರಣೆಯಂತೆ! ಈ ವಿಚಾರವನ್ನು ಸ್ವತಃ ಆರೋಗ್ಯ ಸಚಿವರು ಮತ್ತು ಗಾಂಧಿನಗರದ ಶಾಸಕರೂ ಆದ ದಿನೇಶ್ ಗುಂಡೂರಾವ್ ಅವರೇ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದ್ದಾರೆ!
ದಿನೇಶ್ ಗುಂಡೂರಾವ್ ಅವರ ತಂದೆ ಆರ್.ಗುಂಡೂರಾವ್ ಅವರು ಅಂದು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ಕ್ಯಾನ್ಸರ್ ಪೀಡಿತರಾಗಿ ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಬೇಕಾಯಿತು. ಅಷ್ಟಾದರೂ ತಂದೆಯವರನ್ನು ಉಳಿಸಿಕೊಳ್ಳಲಾಗಲಿಲ್ಲ. ಆಗ ಅನ್ನಿಸಿದ್ದು ರಾಜ್ಯದ ಒಬ್ಬ ಮುಖ್ಯಮಂತ್ರಿಯವರಿಗೇ ಈ ಪರಿಸ್ಥಿತಿಯಾದರೆ, ಇನ್ನು ಸಾಮಾನ್ಯ ಜನರ ಸ್ಥಿತಿ ಹೇಗಿರಬೇಡ? ಎಂದು. ಆದುದರಿಂದಲೇ ನಾನು ಈ ರಾಜ್ಯದ ಆರೋಗ್ಯ ಸಚಿವನಾದ ಮೇಲೆ ಮನುಷ್ಯನ ಬದುಕನ್ನು ಕಬಳಿಸುವ ಕ್ಯಾನ್ಸರ್ ಸೇರಿದಂತೆ 14 ಬಗೆಯ ಅಸಾಂಕ್ರಾಮಿಕ ಕಾಯಿಲೆಗಳ ಪತ್ತೆಗೆ 'ಗೃಹ ಆರೋಗ್ಯ' ಎಂಬ ಯೋಜನೆಯನ್ನು ರೂಪಿಸುವಂತಾಯಿತು ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಎಕ್ಸ್ ನಲ್ಲಿ ಹಾಕಿಕೊಂಡಿರುವ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಅಂದಹಾಗೆ, ದಿನೇಶ್ ಗುಂಡೂರಾವ್ ಅವರು ಕೂಡ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರಂತೆ ತಮ್ಮ ತಂದೆಯವರಿಗೆ 'ಅಣ್ಣ' ಎನ್ನುತ್ತಿದ್ದರಂತೆ!
PublicNext
02/05/2026 12:12 pm