ಬೆಂಗಳೂರು: ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಸಂಸ್ಥೆಯಾದ 'ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮ' (KSDL) 2025-26ನೇ ಹಣಕಾಸು ವರ್ಷದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಸಂಸ್ಥೆಯು ಬರೋಬ್ಬರಿ ₹2016 ಕೋಟಿ ವಹಿವಾಟು ನಡೆಸುವ ಮೂಲಕ ಹೊಸ ದಾಖಲೆ ಬರೆದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ "ಮೈಸೂರು ಸ್ಯಾಂಡಲ್ ಸಾಧನೆಯ ಶಿಖರ" ಸಮಾರಂಭದಲ್ಲಿ ಮಾತನಾಡಿದ ಸಚಿವರು, ಸಂಸ್ಥೆಯು ಗಳಿಸಿರುವ ಲಾಭ ಮತ್ತು ಬೆಳವಣಿಗೆಯ ವಿವರಗಳನ್ನು ಹಂಚಿಕೊಂಡರು.
ಈ ಸಾಲಿನಲ್ಲಿ ಸಂಸ್ಥೆಯು ₹507 ಕೋಟಿ ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ₹157 ಕೋಟಿಯನ್ನು ಸರ್ಕಾರಕ್ಕೆ ಲಾಭಾಂಶವಾಗಿ (Dividend) ನೀಡಲಾಗುವುದು. ಸಂಸ್ಥೆಯು ₹1,000 ಕೋಟಿ ವಹಿವಾಟು ತಲುಪಲು 105 ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ ಕೇವಲ 4 ವರ್ಷಗಳಲ್ಲಿ ವಹಿವಾಟನ್ನು ದುಪ್ಪಟ್ಟುಗೊಳಿಸಿ (₹2,000 ಕೋಟಿ ದಾಟಿ) ಸಾಧನೆ ಮಾಡಿದೆ. ಮಾರುಕಟ್ಟೆಯ ಟ್ರೆಂಡ್‌ಗೆ ತಕ್ಕಂತೆ ಕಳೆದ ಮೂರು ವರ್ಷಗಳಲ್ಲಿ 57 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ಉತ್ಪನ್ನಗಳ ಸಂಖ್ಯೆ 94ಕ್ಕೆ ಏರಿಕೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಈ ಬೃಹತ್ ಸಾಧನೆಯು ಯಾವುದೇ ಹೊಸ ನೇಮಕಾತಿ ಅಥವಾ ಹೊಸ ಯಂತ್ರೋಪಕರಣಗಳ ಖರೀದಿಯಿಲ್ಲದೆ ಲಭಿಸಿದೆ ಎಂಬುದು ಗಮನಾರ್ಹ. ಗುಣಮಟ್ಟದ ಉತ್ಪನ್ನಗಳು, ದಕ್ಷ ನಿರ್ವಹಣೆ ಮತ್ತು ವ್ಯಾಪಾರ ವಿಸ್ತರಣೆಯ ಮೂಲಕವೇ ಈ ಗುರಿ ಮುಟ್ಟಲಾಗಿದೆ. "2028ರ ವೇಳೆಗೆ ₹3,000 ಕೋಟಿ ಮತ್ತು 2030ರ ವೇಳೆಗೆ ₹5,000 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ವಿಜಯಪುರದಲ್ಲಿ ₹229 ಕೋಟಿ ವೆಚ್ಚದಲ್ಲಿ ಹೊಸ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು," ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಗಂಧದ ಎಣ್ಣೆಯ ಪೂರೈಕೆಗಾಗಿ 'ಬೆಳೆಯಿರಿ ಶ್ರೀಗಂಧ' ಯೋಜನೆಯಡಿ ರೈತರೊಂದಿಗೆ ಸಹಭಾಗಿತ್ವ ಹೊಂದಿದ್ದು, ಮುಂದಿನ 10 ವರ್ಷಗಳಲ್ಲಿ 10,000 ಎಕರೆ ಪ್ರದೇಶದಲ್ಲಿ ಶ್ರೀಗಂಧದ ತೋಟಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೆಎಸ್‌ಡಿಎಲ್ ಹಾಕಿಕೊಂಡಿದೆ.
ಈ ಸಮಾರಂಭದಲ್ಲಿ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸುದೀರ್ಘ ಇತಿಹಾಸವಿರುವ ಸರ್ಕಾರಿ ಸಂಸ್ಥೆಯೊಂದು ಜಾಗತಿಕ ಮಟ್ಟದ ಸ್ಪರ್ಧೆಯ ನಡುವೆಯೂ ಇಂತಹ ಲಾಭ ಗಳಿಸಿರುವುದು ರಾಜ್ಯದ ಕೈಗಾರಿಕಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
PublicNext
02/05/2026 03:58 pm