ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡಿನಲ್ಲಿ ಅಚ್ಚರಿಯ ಫಲಿತಾಂಶ, ಆಡಳಿತರೂಢ ಡಿಎಂಕೆ ಸೋಲಿಗೆ ಕಾರಣಗಳೇನು?

ಚೆನ್ನೈ: 234 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡು ವಿಧಾನಸಭೆಗೆ ನಡೆದ ಈ ಬಾರಿಯ ಚುನಾವಣೆಯಲ್ಲಿ ನೂತನ ಟಿವಿಕೆ ಅತಿ ಹೆಚ್ಚು ಸೀಟ್ ಗಳನ್ನು ಗೆದ್ದ ಪಕ್ಷವಾಗಿದೆ.

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಭಾರತೀಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ದಶಕಗಳ ಕಾಲ ದ್ರಾವಿಡ ರಾಜಕಾರಣವನ್ನು ಆಳಿದ ಡಿಎಂಕೆ (DMK) ಈ ಸಲ ಹಿನ್ನಡೆಯನ್ನು ಅನುಭವಿಸಿದರೆ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಅಚ್ಚರಿಯ ಜಯ ದಾಖಲಿಸಿದೆ. ಹಾಗಾದರೆ ತಮಿಳುನಾಡಿನಲ್ಲಿ ಈ ಬದಲಾವಣೆಗೆ ಪ್ರಮುಖ ಕಾರಣಗಳು ಏನಿರಬಹುದು? ಅಂತಾ ಕೇಳಿದರೆ, ಯುವಶಕ್ತಿ ಮತ್ತು ರಾಜಕೀಯ ಬದಲಾವಣೆಯ ಹಂಬಲ ಎಂದು ಹೇಳಬೇಕಾಗುತ್ತೆ. ನಟ ವಿಜಯ್ ಅವರ ಅಪಾರ ಅಭಿಮಾನಿ ಬಳಗವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಂಘಟಿತ ಮತ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತು.

ಪ್ರಮುಖವಾಗಿ ಮೊದಲ ಬಾರಿ ಮತ ಚಲಾಯಿಸುವಂಥ ಯುವಕರು ಸಾಂಪ್ರದಾಯಿಕ ಪಕ್ಷಗಳಿಗಿಂತ ಹೊಸ ನಾಯಕತ್ವವನ್ನು ಬಯಸಿದ್ದರು. ಪರಿಣಾಮ ಆಡಳಿತರೂಢ ಡಿಎಂಕೆ ಪಕ್ಷವು ಧೂಳೀಪಟ ಆಗುವಂತಾಯಿತು. ಎರಡನೇ ಪ್ರಮುಖ ಕಾರಣವೆಂದರೆ, ಚುನಾವಣೆಯ ಸಂದರ್ಭದಲ್ಲಿ ಟಿವಿಕೆ ನೀಡಿದ್ದ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ. ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ದ್ವಂದ್ವ ರಾಜಕಾರಣದಿಂದ ಬೇಸತ್ತಿದ್ದ ತಮಿಳುನಾಡಿನ ಜನರಿಗೆ ಟಿವಿಕೆ ಪಕ್ಷವನ್ನು ಕಟ್ಟಿ ನಟ ವಿಜಯ್ ಅವರು 'ಪರ್ಯಾಯ ರಾಜಕಾರಣ'ದ ಭರವಸೆಯನ್ನು ನೀಡಿದರು. ಇದು ಕೂಡ ಟಿವಿಕೆ ಗೆಲುವಿಗೆ ಮಹತ್ವದ ಅಂಶವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಜೊತೆಗೆ ನಟ ವಿಜಯ್ ಅವರು ತಳಮಟ್ಟದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನತೆ ಇನ್ನಷ್ಟು ಹತ್ತಿರವಾದರು. ತಾನೊಬ್ಬ ಸಿನಿಮಾ ನಟ ಎಂಬುದನ್ನು ಪಕ್ಕಕ್ಕೆ ಇಟ್ಟು ತಮಿಳುನಾಡಿನ ಯುವಕರ ಕಣ್ಮಣಿ ಎಂಬಂತೆ ಭಾಸವಾದರು. ಆದರೆ, ಸಿನಿಮಾ ಪ್ರಚಾರದ ಮಾದರಿಯಲ್ಲೇ ಸಾಮಾಜಿಕ ಜಾಲತಾಣಗಳು ಮತ್ತು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದುದು ವಿಜಯ್ ಅವರ ಪಕ್ಷದ ಗೆಲುವಿಗೆ ಅಡಿಪಾಯವನ್ನು ಒದಗಿಸಿತ್ತು!

ಎಂ.ಕೆ. ಸ್ಟ್ಯಾಲಿನ್ ಸೋಲಿಗೆ ಕಾರಣಗಳು:

ಜಯಲಲಿತಾ ನಿಧನಾ ನಂತರ ಎಐಎಡಿಎಂಕೆ ಪಕ್ಷದಲ್ಲಿ ಉಂಟಾದ ರಾಜಕೀಯ ಶೂನ್ಯತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡಂತಿದ್ದ ಡಿಎಂಕೆ ನಾಯಕ ಎಂ.ಕೆ.ಸ್ಟ್ಯಾಲಿನ್ ಅವರು ತಮಿಳುನಾಡಿನಲ್ಲಿ ಒಂದು ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶಕ್ತರಾದರು. ಆದರೆ, ಹಠಾತ್ತನೆ ಬಂದ ಟಿವಿಕೆ ಪಕ್ಷವನ್ನು ಅಷ್ಟು ಗಂಭೀರವಾಗಿ ಪರಿಗಣಿಸದಿರೋದು ತಪ್ಪಾಗಿದೆ. ಇನ್ನು, ತಮಿಳುನಾಡಿನ

ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹದಗೆಟ್ಟ ಕಾನೂನು ಸುವ್ಯವಸ್ಥೆಯ ಸ್ಥಿತಿಯು ಜನರ ಅಸಮಾಧಾನಕ್ಕೆ ಕಾರಣವಾಯಿತು ಅಂತಾನೂ ವ್ಯಾಖ್ಯಾನಿಸಲಾಗುತ್ತೆ.

ಈ ನಡುವೆ ಕುಟುಂಬ ರಾಜಕಾರಣದ ಆರೋಪ, ಉದಯನಿಧಿ ಸ್ಟ್ಯಾಲಿನ್ ಅವರ ಅತಿಯಾದ ಪ್ರಚಾರ ಮತ್ತು ಪಕ್ಷದಲ್ಲಿ ಅವರ ಪ್ರಾಬಲ್ಯವು ಮತದಾರರಲ್ಲಿ ನಕಾರಾತ್ಮಕ ಭಾವನೆ ಮೂಡಿಸಿರಲಿಕ್ಕೆ ಸಾಕು. ಸಣ್ಣ ಪಕ್ಷಗಳ ಮತ ವಿಭಜನೆ ಡಿಎಂಕೆ ಮೈತ್ರಿಕೂಟಕ್ಕೆ ಹೋಗುತ್ತಿದ್ದ ಮತಗಳು ಟಿವಿಕೆ ಮತ್ತು ಇತರ ಸಣ್ಣ ಪಕ್ಷಗಳ ಪಾಲಾದದ್ದು ಸ್ಟ್ಯಾಲಿನ್ ಅವರಿಗೆ ಭಾರಿ ಹೊಡೆತ ನೀಡಿತು. ಒಟ್ಟಾರೆ ತಮಿಳುನಾಡಿನ ಮತದಾರರು ಈ ಬಾರಿ ಭಾವುಕತೆಗಿಂತ ಹೆಚ್ಚಾಗಿ ಅಭಿವೃದ್ಧಿ ಮತ್ತು ಹೊಸತನಕ್ಕೆ ಆದ್ಯತೆ ನೀಡಿದ್ದಾರೆ. ಇದು ಸ್ಟ್ಯಾಲಿನ್ ಅವರ ಅನುಭವಕ್ಕಿಂತ ವಿಜಯ್ ಅವರ ಜನಪ್ರಿಯತೆಗೆ ಲಭಿಸಿದ ದೊಡ್ಡ ಗೆಲುವಾಗಿದೆ ಎಂದು ಹೇಳಬಹುದು. ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗೋದು ಪಕ್ಕಾ ಆಗಿದ್ದು, ಅವರ ಆಡಳಿತವು ಹೇಗಿರಲಿದೆ? ಅನ್ನೋದು ಅಷ್ಟೇ ಕುತೂಹಲ ಮೂಡಿಸಿದೆ.

Edited By : Nirmala Aralikatti
PublicNext

PublicNext

04/05/2026 05:32 pm

Cinque Terre

10.01 K

Cinque Terre

1