ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಮೂವರಲ್ಲಿ ಕೇರಳದ ಮುಂದಿನ ಸಿಎಂ ಯಾರು?

ಬೆಂಗಳೂರು/ ತಿರುವನಂತಪುರಂ: 2026ರ ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ದಶಕದ ನಂತರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್-UDF ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಆಡಳಿತಾರೂಢ ಎಲ್‌ಡಿಎಫ್ ಗೆ ಹೀನಾಯ ಸೋಲು ಉಂಟಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ 'ಹ್ಯಾಟ್ರಿಕ್' ಸಿಎಂ ಕನಸು ಭಗ್ನಗೊಂಡಿದೆ.

ಎಲ್‌ಡಿಎಫ್ ಸೋಲಿಗೆ ಪ್ರಮುಖ ಕಾರಣಗಳೇನು?

ದೇವರನಾಡು ಕೇರಳದಲ್ಲಿ ಸತತ ಎರಡು ಅವಧಿಗೆ ಅಧಿಕಾರದಲ್ಲಿದ್ದ ಎಲ್‌ಡಿಎಫ್ ವಿರುದ್ಧ ಜನರಲ್ಲಿ ಅಸಮಾಧಾನ ಮೂಡಿತ್ತು. ಅದರಲ್ಲೂ ಬೆಲೆ ಏರಿಕೆ ಮತ್ತು ನಿರುದ್ಯೋಗದಂಥ ಸಮಸ್ಯೆಗಳು ಎಡರಂಗಕ್ಕೆ ಮುಳುವಾದವು.

ಮಾತ್ರವಲ್ಲ, ಸರ್ಕಾರದ ವಿರುದ್ಧ ಕೇಳಿಬಂದ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ವಿಚಾರಣೆಗಳು ಎಲ್‌ಡಿಎಫ್ ವರ್ಚಸ್ಸಿಗೆ ಧಕ್ಕೆ ತಂದವು. ಇದರಿಂದಾಗಿ ಮತದಾರನ ಮನಸ್ಸು ಯುಡಿಎಫ್ ಆಯ್ಕೆಯತ್ತ ಹೊರಳಿತು ಎಂದು ಹೇಳಲಾಗುತ್ತೆ. ಇದರಿಂದಾಗಿ ಸತತ ಎರಡು ಬಾರಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸಿಎಂ ಪಿಣರಾಯಿ ವಿಜಯನ್ ಅವರು ಹ್ಯಾಟ್ರಿಕ್ ಸಿಎಂ ಆಗುವ ಅವರ ಕನಸು ನನಸಾಗಲಿಲ್ಲ!

ಇನ್ನು, ಪಯ್ಯನ್ನೂರಿನಂತಹ ಎಲ್ ಡಿಎಫ್ ನ ಭದ್ರಕೋಟೆಗಳಲ್ಲಿ ಸಿಪಿಐ(ಎಂ) ಬಂಡಾಯ ಅಭ್ಯರ್ಥಿಗಳ ಗೆಲುವು ಪಕ್ಷದ ಒಳಗಿನ ಬಿರುಕನ್ನು ಎತ್ತಿ ತೋರಿಸುವಂತಿದೆ. ಮತ್ತೊಂದೆಡೆ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಿನ ಸಮನ್ವಯತೆ ಹಾಗೂ ವಯನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯುಡಿಎಫ್ ಪರ ಅಲೆ ಎದ್ದಿದ್ದು ಕಾಂಗ್ರೆಸ್ ಪಾಲಿಗೆ ವರದಾನವಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೇರಳದ ಮುಂದಿನ ಮುಖ್ಯಮಂತ್ರಿ ಯಾರು?

ಯುಡಿಎಫ್ ಭರ್ಜರಿ ಜಯಗಳಿಸಿರುವುದರಿಂದ ಕಾಂಗ್ರೆಸ್ ಪಾಳಯದಲ್ಲಿ ಹರ್ಷ ಉಂಟಾಗಿದ್ದು, ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಕೂಡ ಆರಂಭವಾಗಿದೆ. ಸದ್ಯದ ಮಾಹಿತಿಯ ಪ್ರಕಾರ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಿದ ವಿ.ಡಿ.ಸತೀಶನ್ ಅವರು ಕೇರಳದ ಸಿಎಂ ಗಾದಿಗೆ ಹತ್ತಿರವಿದ್ದು, ಕಾಂಗ್ರೆಸ್ ಹೈಕಮಾಂಡ್‌ನ ಮೊದಲ ಆಯ್ಕೆಯಾಗುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತೆ.

ಇನ್ನು, ಸದ್ಯ ರಾಷ್ಟ್ರ ರಾಜಕಾರಣದಲ್ಲಿರುವ ಎಐಸಿಸಿ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಕೆ.ಸಿ.ವೇಣುಗೋಪಾಲ್ ಅವರು ಕೇರಳ ಸಿಎಂ ರೇಸ್ ನಲ್ಲಿರೋ ಎರಡನೇ ಪ್ರಮುಖರಾಗಿದ್ದು, ರಾಷ್ಟ್ರ ರಾಜಕಾರಣದಿಂದ ರಾಜ್ಯಕ್ಕೆ ಮರಳಿ ವೇಣುಗೋಪಾಲ್ ಅವರು ಕೇರಳದ ಸಿಎಂ ಪಟ್ಟವನ್ನು ಅಲಂಕರಿಸುತ್ತಾರೆಂಬ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.

ಕೊನೆಯದಾಗಿ ಕೇರಳ ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಚೆನ್ನಿತ್ತಲ ರಮೇಶ್ ಅವರು ಕೂಡ ಸಿಎಂ ರೇಸ್ ನಲ್ಲಿರೋ ಕಾಂಗ್ರೆಸ್ ನಾಯಕರು. ಅಂತಿಮವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಈ ಮೂವರಲ್ಲಿ ಓರ್ವರನ್ನು ಕೇರಳದ ಮುಖ್ಯಮಂತ್ರಿಯನ್ನಾಗಿ ಅಧಿಕೃತವಾಗಿ ಘೋಷಿಸಲಾಗುತ್ತೆ ಎಂದು ಅಲ್ಲಿನ ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ಕೇರಳದ ಮತದಾರರು ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ತಮ್ಮ ಈ ಹಿಂದಿನ ಸಂಪ್ರದಾಯವನ್ನು ಈ ಬಾರಿ ಮತ್ತೆ ಮುಂದುವರಿಸಿದಂತೆ ಕಾಣುತ್ತೆ.

Edited By : Nagaraj Tulugeri
PublicNext

PublicNext

04/05/2026 05:49 pm

Cinque Terre

15.82 K

Cinque Terre

0