ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಗೆಲುವಿನ ಹಿನ್ನೆಲೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಂತೋಷ ವ್ಯಕ್ತಪಡಿಸಿ, ಕ್ಷೇತ್ರದ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದಾವಣಗೆರೆ ದಕ್ಷಿಣದ ಎಲ್ಲಾ ಜಾತಿ, ಜನಾಂಗದ ಮತದಾರರು ಹಾಗೂ ಬಡವರು ಆಶೀರ್ವದಿಸಿ ಸಮರ್ಥ್ ಅವರನ್ನು ಗೆಲ್ಲಿಸಿದ್ದಾರೆ. ಅವರಿಗೆ ನಾನು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಹೇಳಿದರು.
ತಮ್ಮ ತಂದೆ ಶಾಮನೂರು ಶಿವಶಂಕರಪ್ಪ ಹಾಕಿಕೊಟ್ಟ ಅಭಿವೃದ್ಧಿಯ ಹಾದಿಯಲ್ಲಿ ಅವರ ಮೊಮ್ಮಗ ಸಮರ್ಥ್ ಇನ್ನಷ್ಟು ಜನಪರ ಕೆಲಸಗಳನ್ನು ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ ಅವರು, “ನಾವು 1992-93ರಿಂದ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರಿಸುತ್ತೇವೆ” ಎಂದರು.
ಈ ಗೆಲುವು ಒಬ್ಬ ವ್ಯಕ್ತಿಯ ಸಾಧನೆ ಅಲ್ಲ, ಕಾರ್ಯಕರ್ತರು, ಅಭಿಮಾನಿಗಳು, ಕೆಪಿಸಿಸಿ, ಎಐಸಿಸಿ ನಾಯಕರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಹಾಗೂ ಎಲ್ಲಾ ಶಾಸಕರ ಸಮೂಹ ಶ್ರಮದ ಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಿಜೆಪಿ ಹಣದ ಬಲದಿಂದ ಕಾಂಗ್ರೆಸ್ ಗೆದ್ದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಇದೇ ರೀತಿಯ ಆರೋಪಗಳನ್ನು ಹಿಂದೆಯೂ ಮಾಡಿದ್ದಾರೆ. ಆದರೆ, ಜನತೆ ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ನಮ್ಮ ಗೆಲುವಿನ ಮೂಲ” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿರುವುದು ಮತ್ತು ಕಾರ್ಯಕರ್ತರು ನಡೆಸಿದ ಬಿರುಸಿನ ಪ್ರಚಾರ ಈ ಜಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಇದೇ ವೇಳೆ ಸ್ಟ್ರಾಂಗ್ ರೂಮ್ ಕೀ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಟಿವಿಯಲ್ಲಿ ನೋಡಿದ್ದೇನೆ. ಆದರೆ, ಕಾನೂನುಬದ್ಧವಾಗಿ ಚುನಾವಣಾ ಆಯೋಗ ಮತ್ತು ಅಧಿಕಾರಿಗಳು ಅಲ್ಲಿ ಇರುವುದರಿಂದ ಯಾವುದೇ ಲೋಪವಾಗುವ ಸಾಧ್ಯತೆ ಇಲ್ಲ” ಎಂದು ಸ್ಪಷ್ಟನೆ ನೀಡಿದರು.
PublicNext
04/05/2026 10:53 pm
LOADING...