ಚಿತ್ರದುರ್ಗ: ಹೀಗೆ ಕೈಕೈ ಹಿಡಿದು ಸಪ್ತಪದಿ ತುಳಿಯುತ್ತಿರೋ ಯುವ ಪ್ರೇಮಿಗಳು. ವಧುವಿನ ಕೊರಳಿಗೆ ಮೂರು ಗಂಟು ಹಾಕುತ್ತಿರೋ ವರ. ಇವರಿಬ್ಬರ ಕಲ್ಯಾಣ ಮಹೋತ್ಸವ ಕಂಡು ಅಕ್ಷತೆ ಹಾಕಿ ಶುಭ ಹಾರೈಸುತ್ತಿರೋ ಸಂಬಂಧಿಕರು. ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಸಿದ್ದರಾಮೇಶ್ವರ ಕಲ್ಯಾಣ ಮಂಟಪ.
ಹೌದು ಕಡೂರು ಮೂಲದ ಅವಿನಾಶ್ ಹಾಗೂ ಹೊಸದುರ್ಗ ಮೂಲದ ಸಂಗೀತ ಇಬ್ಬರಿಗೂ ಕೂಡಾ ಮಾತು ಬರೋದಿಲ್ಲ, ಅಷ್ಟೇ ಅಲ್ಲದೇ ಇಬ್ಬರಿಗೂ ಕೂಡಾ ಕಿವಿ ಕೂಡಾ ಕೇಳೋದಿಲ್ಲ. ಆದ್ರೆ ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಮಾತುಗಳಿಲ್ಲದೇ ಹೋದರು ಕೂಡಾ ಮೌನ ಭಾವನೆಗಳ ಮೂಲಕ ಇಬ್ಬರಿಗೂ ಭಾಂಧವ್ಯ ಬೆಸೆದಿತ್ತು. ಮೌನ ಸಂಭಾಷಣೆ ಮೂಲಕ ಪ್ರೀತಿಸಿ, ಪರಸ್ಪರ ಅರ್ಥ ಮಾಡಿಕೊಂಡು ಮದುವೆಗೆ ಒಪ್ಪಿದ್ರು. ಆದ್ರೆ ಇಬ್ಬರ ಮನೆಯಲ್ಲಿ ಪೋಷಕರು ಆರಂಭದಲ್ಲಿ ಮದುವೆಗೆ ಒಪ್ಪಿರಲಿಲ್ಲ. ಬಳಿಕ ಪೋಷಕರನ್ನ ಒಪ್ಪಿಸಿರೋ ಅವಿನಾಶ್ ಹಾಗೂ ಸಂಗೀತ ಜೋಡಿ ಹಸೆಮಣೆ ಏರಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲೇ ಸಪ್ತಪದಿ ತುಳಿದಿದ್ದು ವಿಶೇಷವಾಗಿತ್ತು.
ಮೈಸೂರಿನ ಜೆ.ಎಸ್.ಎಸ್ ವಿಕಲಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಯುವಕ ಅವಿನಾಶ್ ಗೋಲ್ಡ್ ಡಿಸೈನಿಂಗ್ ಕೋರ್ಸ್ನಲ್ಲಿ ಡಿಪ್ಲೋಮೊ ಮುಗಿಸಿದ್ರೆ, ಯುವತಿ ಸಂಗೀತ ಕೂಡಾ ಡಿಪ್ಲೋಮೋ ಮಾಡಿ ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾಳೆ. ಇಬ್ಬರಿಗೂ ಕೂಡಾ ಕಾಲೇಜು ದಿನಗಳಲ್ಲೇ ಪ್ರೇಮಾಂಕುರವಾಗಿತ್ತು. ಇದೇ ಪ್ರೀತಿಯ ಪಯಣ ಇದೀಗ ಸಪ್ತಪದಿ ತುಳಿಸಿದ್ದು ಮಾತ್ರ ವಿಶೇಷ. ಅಲ್ಲದೇ ಯುವಕ ಅವಿನಾಶ್ ಗೋಲ್ಡ್ ಡಿಸೈನಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಪದಕ ಗಳಿಸಿದ್ದು, ಅಂತರಾಷ್ಟೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದಿದ್ದು ಮತ್ತೊಂದು ವಿಶೇಷ. ಇನ್ನೂ ಅಪರೂಪದ ಜೋಡಿ ವಿವಾಹಕ್ಕೆ ಅವಿನಾಶ್ ಹಾಗೂ ಸಂಗೀತ ಸ್ನೇಹಿತರು, ಸಂಬಂಧಿಕರು ಕೂಡಾ ಆಗಮಿಸಿ ಶುಭಹಾರೈಸಿದ್ದಾರೆ.
ಒಟ್ಟಾರೇ ಮಾತು ಬಾರದೇ, ಕಿವಿ ಕೆಳದೇ ಇದ್ದರೂ ಕೂಡಾ ಮೌನ ಭಾಷೆಯ ಮೂಲಕವೇ ಅವಿನಾಶ್ ಹಾಗೂ ಸಂಗೀತ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮುಂದಿನ ಜರ್ನಿ ಹೀಗೆ ಸುಖವಾಗಿರಲಿ ಅನ್ನೋದು ನಮ್ಮ ಆಶಯ.
PublicNext
05/05/2026 06:21 pm