ಧಾರವಾಡ: ಎಷ್ಟೋ ಹೋರಾಟಗಳ ನಂತರ ತಣ್ಣಗಾಗಿದ್ದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಕೂಗು.. ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯ ವಿಚಾರದಲ್ಲಿ ಬಿಜೆಪಿ ತನ್ನ ನಿಲುವನ್ನು ಬದಲಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸುವ ಬದಲು ಬೃಹತ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಮುಂದಾಗಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿಯ ಈ ದ್ವಂದ್ವ ನಿಲುವನ್ನು ಖಂಡಿಸಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಸಮಿತಿ ಮತ್ತು ಕಾಂಗ್ರೆಸ್ ನಾಯಕರು ಮತ್ತೊಂದು ಸುತ್ತಿನ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಧಾರವಾಡಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಅಭಿವೃದ್ಧಿಯಲ್ಲಿನ ತಾರತಮ್ಯ ಹೋಗಲಾಡಿಸಲು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆ ಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಕುರಿತು ಚಿಂತನ ಮಂಥನ ಸಭೆಯನ್ನು ಸಹ ಕರೆಯಲಾಗಿದೆ.
ರಾಜ್ಯ ಸರ್ಕಾರವು ಈಗಾಗಲೇ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಅನುಮೋದನೆ ನೀಡಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಆದರೆ ಬಿಜೆಪಿ ರಾಜಕೀಯ ಕಾರಣಗಳಿಗಾಗಿ ರಾಜ್ಯಪಾಲರ ಮೂಲಕ ಇದಕ್ಕೆ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಈ ಹಿಂದೆ ಪ್ರತ್ಯೇಕ ಪಾಲಿಕೆ ರಚನೆಗೆ ಬೆಂಬಲ ನೀಡಿದ್ದ ಬಿಜೆಪಿ ನಾಯಕರು, ಈಗ ವಿಭಜನೆಯಾದರೆ ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗದ ಅಡಿಯಲ್ಲಿ ಸಿಗುವ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಕೈತಪ್ಪಬಹುದು ಎಂಬ ಕಾರಣ ನೀಡಿ ವಿಭಜನೆಯನ್ನು ವಿರೋಧಿಸುತ್ತಿದ್ದಾರೆ.
10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಿಗೆ ಮಾತ್ರ ಈ ವಿಶೇಷ ಅನುದಾನ ಲಭ್ಯವಿರುವುದರಿಂದ, ಪಾಲಿಕೆ ವಿಭಜನೆಯಾದರೆ ಎರಡೂ ನಗರಗಳು ಈ ಸೌಲಭ್ಯದಿಂದ ವಂಚಿತವಾಗಲಿವೆ ಎಂದು ತಮ್ಮ ನಿಲುವು ಸಮರ್ಥನೆ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ವಿಷಯ ರಾಜಕೀಯ ವಲಯದಲ್ಲಿ ಹಾಗೂ ಜನರಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪಾಲಿಕೆಯಾಗಿಯೇ ಉಳಿಯುತ್ತಾ ಅಥವಾ ಪ್ರತ್ಯೇಕ ಪಾಲಿಕೆಯಾಗಿ ಧಾರವಾಡ ಹುಬ್ಬಳ್ಳಿ ಬೇರ್ಪಡುತ್ತವಾ ಎಂಬುದನ್ನು ಕಾಯ್ದು ನೋಡಬೇಕಾಗಿದೆ.
ವರದಿ: ಮಂಜುನಾಥ ಕವಳಿ ಪಬ್ಲಿಕ್ ನೆಕ್ಸ್ಟ್ ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/05/2026 08:11 pm