ಕುಶಾಲನಗರ: ಗಿರಿಜನ ಹಾಡಿಯೊಳಗೆ ಅಕ್ರಮವಾಗಿ ನಿರ್ಮಾಣಗೊಂಡ ಚರ್ಚ್ ಉದ್ಘಾಟನೆಗೆ ತಮಿಳುನಾಡಿನಿಂದ ಆಗಮಿಸಿದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಹೇರೂರು ಹಾಡಿಯಲ್ಲಿ ನಡೆದಿದೆ.
ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ನಾಕೂರು ಶಿರಂಗಾಲ ಗ್ರಾಪಂ ಗೆ ಒಳಪಡುವ ಹೇರೂರು ಗಿರಿಜನ ಹಾಡಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಚರ್ಚ್ ಉದ್ಘಾಟನೆ ಸಂದರ್ಭ ಸ್ಥಳೀಯ ನಿವಾಸಿಗಳು ಆಗಮಿಸಿ ಕಾರ್ಯಕ್ರಮ ಮೊಟಕುಗೊಳಿಸಿ ತಮಿಳುನಾಡಿನಿಂದ ಐದಾರು ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ತಡೆಹಿಡಿದು ಪೊಲೀಸರಿಗೆ ಮತ್ತು ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್, ಕುಶಾಲನಗರ ಮತ್ತು ಸುಂಟಿಕೊಪ್ಪ ಠಾಣಾಧಿಕಾರಿಗಳಾದ ಮೋಹನ್ ರಾಜ್, ರಾಮಚಂದ್ರ, ನಾಕೂರು ಶಿರಂಗಾಲ ಗ್ರಾಪಂ ಆಡಳಿತಾಧಿಕಾರಿ ಶ್ರೀಕಾಂತ್, ಪಿಡಿಒ ಅಸ್ಮಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಇದೇ ಸಂದರ್ಭ ಸ್ಥಳೀಯರು ಮತ್ತು ಹಾಡಿ ನಿವಾಸಿಗಳ ನಡುವೆ ವಾಗ್ವಾದ ನಡೆಯಿತು.
ನಮ್ಮಿಷ್ಟದಂತೆ ನಾವು ಪ್ರಾರ್ಥನೆಯಲ್ಲಿ ತೊಡಗಿರುವುದಾಗಿ ಹಾಡಿ ವಾಸಿಗಳು ವಾದಿಸಿದರು. ಈ ಸಂದರ್ಭ ಗ್ರಾಪಂ ಮೂಲಕ ಯಾವುದೇ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿರುವುದು ಕಂಡುಬಂತು. ಬಳಿಕ ಪೊಲೀಸರು ತಮಿಳುನಾಡು ಮೂಲದ 40 ಕ್ಕೂ ಅಧಿಕ ವ್ಯಕ್ತಿಗಳನ್ನು ವಾಹನ ಸಹಿತ ವಶಕ್ಕೆ ಪಡೆದು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥರಾದ ಬಿಜೆಪಿ ಮುಖಂಡ ಹೇರೂರು ಚಂದ್ರಶೇಖರ್, ಹೇರೂರು ಗಿರಿಜನ ಹಾಡಿಯಲ್ಲಿ ಮತಾಂತರ ಚಟುವಟಿಕೆ ನಡೆಯುತ್ತಿದೆ, ಮತಾಂತರಗೊಂಡ ಆದಿವಾಸಿಗಳು ಸಮಾಜ ಕಲ್ಯಾಣ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಿಸಿ ಪ್ರಾರ್ಥನೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಇದರ ಉದ್ಘಾಟನೆಗೆಂದು ತಮಿಳುನಾಡು ಮೂಲಕ ವ್ಯಕ್ತಿಗಳು ಆಗಮಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು. ಅಕ್ರಮ ಮತಾಂತರ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಒತ್ತಾಯಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಜಗನ್ನಾಥ್ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ದೊರೆಯುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಮತ್ತೊಂದು ಧರ್ಮದ ಪರಿಪಾಲನೆ ನಡೆಯುತ್ತಿದೆ. ಇಂತಹವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.
PublicNext
17/05/2026 01:10 pm