ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಶಾಲನಗರ: ಗಾಯಗೊಂಡ ಮಾರ್ತಾಂಡ ಸಾವು - ದುಬಾರೆ ಬಂದ್

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿ ಪರಿಸ್ಥಿತಿ ಅಕ್ಷರಶಃ ಸ್ಮಶಾನವಾಗಿದೆ. ನಿನ್ನೆ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಭೀಕರ ಕಾಳಗ ನಡೆದಿತ್ತು. ಈ ಆನೆಗಳ ಸಂಘರ್ಷದ ವೇಳೆ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಆನೆಗಳ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯ ಬೆನ್ನಲ್ಲೇ ಕಂಜನ್ ಆನೆಯಿಂದ ಹೊಟ್ಟೆಯ ಭಾಗಕ್ಕೆ ಗಂಭೀರವಾಗಿ ತಿವಿಸಿಕೊಂಡಿದ್ದ ಮಾರ್ತಾಂಡ ಆನೆ ಅಸ್ವಸ್ಥಗೊಂಡು ನೆಲಕ್ಕೆ ಉರುಳಿತ್ತು. ಕೂಡಲೇ ಚಿಟ್ಟಿಯಪ್ಪ ಹಾಗೂ ಮುಜೀಬ್ ರ ವೈದ್ಯರ ತಂಡ ಚಿಕಿತ್ಸೆ ನೀಡಿದರೂ ಆದರೆ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಮಾರ್ತಾಂಡನ ಅಗಲಿಕೆ ಮಾವುತರು ಗೌಸ್ ಮತ್ತು ಕಾವಾಡಿಗ ನವೀನ್ ಎದೆಯನ್ನು ಸೀಳುವಂತೆ ಮಾಡಿದೆ. ಮನೆಯ ಮಗನಂತೆ ಸಾಕಿದ್ದ ಆನೆಯ ಮೃತದೇಹದ ಮುಂದೆ ಮಾವುತರಾದ ಗೌಸ್ ಮತ್ತು ನವೀನ್ ಕುಟುಂಬ ಸಮೇತ ಕುಳಿತು ಗೋಳಾಡುತ್ತಿರೋ ದೃಶ್ಯ ಮನಕಲಕುವಂತಿದೆ. ಶಿಬಿರದ ಶಾಂತ ಸ್ವಭಾವದ ಆನೆಗಳು ಏಕಾಏಕಿ ಈ ರೀತಿ ವೈಲ್ಡ್ ಆಗಿದ್ದು ಯಾಕೆ ಅನ್ನೋದು ಈಗ ಅರಣ್ಯ ಇಲಾಖೆಗೂ ಪ್ರಶ್ನೆಯಾಗಿ ಕಾಡುತ್ತಿದೆ. ಆನೆಗಳ ನೇಚರ್ ಕೆಲವೊಮ್ಮೆ ಊಹಿಸಲೂ ಸಾಧ್ಯವಾಗದ ರೀತಿ ಬದಲಾಗುತ್ತದೆ ಅನ್ನೋದಕ್ಕೆ ಈ ದುರಂತವೇ ಸಾಕ್ಷಿ.

ಪ್ರತಿನಿತ್ಯ ಸಾವಿರಾರು ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ದುಬಾರೆಯಲ್ಲಿ ಈಗ ನೀರವ ಮೌನ ಆವರಿಸಿದೆ. ಎರಡು ದಿನಗಳ‌ ಕಾಲ ಪ್ರವಾಸಿಗರಿಗೆ ದುಬಾರೆಗೆ ನಿರ್ಬಂಧ ವಿಧಿಸಿದ್ದಾರೆ. ಈ ಹಿಂದೆ ಜನರು ಆನೆಗಳ ಪಕ್ಕದಲ್ಲೇ ನಿಂತು ಸಂಭ್ರಮಿಸುತ್ತಿದ್ದರು ಆದರೆ ಇಂತಹ ಆಕಸ್ಮಿಕ ದುರಂತ ಯಾರೂ ನಿರೀಕ್ಷಿಸಿರಲಿಲ್ಲ. ಒಂದು ಆನೆಯನ್ನು ನಿಯಂತ್ರಿಸಲು ಐವರು ಸಿಬ್ಬಂದಿ ಬೇಕಾಗುತ್ತದೆ ಆದರೆ ಆನೆಗಳು ಆವೇಶಕ್ಕೆ ಒಳಗಾದಾಗ ನಿಯಂತ್ರಿಸುವುದು ಕಷ್ಟ ಎನ್ನುತ್ತಾರೆ ಅರಣ್ಯ ಸಿಬ್ಬಂದಿ. ಸದ್ಯ ಘಟನೆಯ ಬಗ್ಗೆ ಸರ್ಕಾರ ಪ್ರಾಥಮಿಕ ವರದಿ ಕೇಳಿದ್ದು, ಇಲಾಖೆ ತನಿಖೆ ಆರಂಭಿಸಿದೆ.

ಇನ್ನು ದುಬಾರೆ ಪ್ರವಾಸಿ ತಾಣದಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬರತ್ತೆ ಆದ್ರೆ ಯಾವುದೇ ರೀತಿಯಲ್ಲಿ ಸೌಕರ್ಯಗಳನ್ನು ಕೊಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಜೊತೆಗೆ ಶಿಬಿರದಲ್ಲಿ ಆನೆಗಳ ಸಂಖ್ಯೆಯು ಹೆಚ್ಚಿದೆ ಆದ್ರೆ ಸಿಬ್ಬಂದಿಗಳ ಕೊರತೆಯಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಒಟ್ಟಿನಲ್ಲಿ ಕೊಡಗಿನ ಪ್ರವಾಸೋದ್ಯಮದ ಹೆಮ್ಮೆಯಾಗಿದ್ದ ದುಬಾರೆ. ಇಂದು ಸಾವಿನ ಸುದ್ದಿಯಿಂದ ಸುದ್ದಿಯಾಗಿದೆ. ಇತ್ತ ಮಹಿಳೆಯ ಸಾವು ಅತ್ತ ನೆಚ್ಚಿನ ಆನೆಯ ಅಗಲಿಕೆ ಮಾವುತರನ್ನು ತೀವ್ರ ಆಘಾತಕ್ಕೆ ದೂಡಿದೆ. ಶಿಬಿರದ ಸುರಕ್ಷತೆಯ ಬಗ್ಗೆ ಈಗ ಹೊಸ ಚರ್ಚೆಗಳು ಶುರುವಾಗಿದ್ದು ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಯಾವ ಕ್ರಮ ತೆಗೆದುಕೊಳ್ಳುತ್ತೋ ಕಾದು ನೋಡಬೇಕಿದೆ.

Edited By : PublicNext Desk
PublicNext

PublicNext

20/05/2026 07:12 am

Cinque Terre

4.98 K

Cinque Terre

0