ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀದಿಗೆ ಬಿಗ್ ಶಾಕ್ : ಮಮತಾ ಬ್ಯಾನರ್ಜಿ ತಾತ್ಕಾಲಿಕ ಕಚೇರಿ ಖಾಲಿ ಮಾಡುವಂತೆ ಮಾಲೀಕನ ನೋಟಿಸ್!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಈಗ ಮತ್ತೊಂದು ದೊಡ್ಡ ಬಿಗ್ ಶಾಕ್ ಎದುರಾಗಿದೆ. ಪೂರ್ವ ಕೋಲ್ಕತ್ತಾದ ಇಎಂ ಬೈಪಾಸ್ ಬಳಿಯ ಟಾಪ್ಸಿಯಾ ಪ್ರದೇಶದಲ್ಲಿದ್ದ ಪಕ್ಷದ ತಾತ್ಕಾಲಿಕ ಪ್ರಧಾನ ಕಚೇರಿ ‘ತೃಣಮೂಲ ಭವನ’ವನ್ನು ಖಾಲಿ ಮಾಡುವಂತೆ ಆ ಐಷಾರಾಮಿ ಬಹುಮಹಡಿ ಕಟ್ಟಡದ ಮಾಲೀಕರು ಟಿಎಂಸಿ ನಾಯಕತ್ವಕ್ಕೆ ಖಡಕ್ ನೋಟಿಸ್ ನೀಡಿದ್ದಾರೆ.

ರಾಜ್ಯದ ಪ್ರಸಿದ್ಧ ಕಂಪನಿ ‘ಮಾಡರ್ನ್ ಡೆಕೋರೇಟರ್ಸ್’ ಮುಖ್ಯಸ್ಥ ಮೊಂಟು ಸಹಾ ಈ ಐಷಾರಾಮಿ ಕಟ್ಟಡದ ಮಾಲೀಕರಾಗಿದ್ದಾರೆ. ಇತ್ತೀಚೆಗೆ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈ ಕಚೇರಿಯ ಹೊರಗೆ ಭೀಕರ ಹಿಂಸಾಚಾರ ಮತ್ತು ಧ್ವಂಸ ಕೃತ್ಯ ನಡೆದಿತ್ತು. ಈ ಘಟನೆಯಿಂದ ಆತಂಕಗೊಂಡಿರುವ ಮಾಲೀಕರು ಸುರಕ್ಷತೆಯ ಕಾರಣ ನೀಡಿ ಕಚೇರಿ ಖಾಲಿ ಮಾಡುವಂತೆ ಟಿಎಂಸಿ ನಾಯಕತ್ವಕ್ಕೆ ಮೌಖಿಕವಾಗಿ ತಿಳಿಸಿದ್ದಾರೆ. "ಕಟ್ಟಡಕ್ಕೆ ಏನಾದರೂ ಹಾನಿಯಾದರೆ ನಷ್ಟ ನನಗೇ ಹೊರತು ಬೇರೆ ಯಾರಿಗೂ ಅಲ್ಲ. ಚುನಾವಣಾ ಫಲಿತಾಂಶ ಬಂದ ತಕ್ಷಣ ಇಲ್ಲಿ ನಡೆದ ದಾಂಧಲೆಯಿಂದಾಗಿ ನಾನು ಈ ನಿರ್ಧಾರ ತಳೆದಿದ್ದೇನೆ" ಎಂದು ಮೊಂಟು ಸಹಾ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ಬದಲಾವಣೆಯಾಗಿದ್ದರೂ, ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಪಿತೂರಿ ಅಥವಾ ಒತ್ತಡವಿಲ್ಲ ಎಂದು ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಟಿಎಂಸಿ ಪಕ್ಷವು ಇಷ್ಟು ದಿನ ಒಪ್ಪಂದದಂತೆ ಸರಿಯಾಗಿ ಬಾಡಿಗೆ ಪಾವತಿಸಿದೆ ಎಂದಿರುವ ಅವರು, ಮುಂದಿನ ಎರಡು ತಿಂಗಳೊಳಗೆ ಸಂಪೂರ್ಣವಾಗಿ ಕಟ್ಟಡವನ್ನು ಖಾಲಿ ಮಾಡಿಕೊಡುವುದಾಗಿ ಟಿಎಂಸಿ ನಾಯಕತ್ವ ತಮಗೆ ಭರವಸೆ ನೀಡಿದೆ ಎಂದು ಹೇಳಿದ್ದಾರೆ. ಆದರೆ ಈ ಇಡೀ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

2021ರ ಚುನಾವಣೆಯ ನಂತರ ಟಾಪ್ಸಿಯಾದಲ್ಲಿದ್ದ ಹಳೆಯ ಕಚೇರಿಯನ್ನು ನವೀಕರಿಸಲು ಕೆಡವಲಾಗಿತ್ತು. ಆ ಕಾರಣಕ್ಕಾಗಿ 2022ರಲ್ಲಿ ಈ ಐಷಾರಾಮಿ ಕಟ್ಟಡವನ್ನು ಪರ್ಯಾಯ ಕಚೇರಿಯಾಗಿ ಬಾಡಿಗೆಗೆ ಪಡೆಯಲಾಗಿತ್ತು. ಆರಂಭದಲ್ಲಿ 2 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದರೂ, ಮುಖ್ಯ ಕಚೇರಿಯ ಕೆಲಸ ಮುಗಿಯದ ಕಾರಣ ಒಪ್ಪಂದವನ್ನು ವಿಸ್ತರಿಸಲಾಗಿತ್ತು.

ಕಳೆದ ನಾಲ್ಕು ವರ್ಷಗಳಿಂದ ಈ ಕಟ್ಟಡವೇ ಟಿಎಂಸಿಯ ಎಲ್ಲಾ ರಾಜಕೀಯ ಚಟುವಟಿಕೆಗಳ ಮುಖ್ಯ ಕೇಂದ್ರವಾಗಿತ್ತು. ಇಲ್ಲಿ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಮತ್ತು ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಪ್ರತ್ಯೇಕ ಸುಸಜ್ಜಿತ ರೂಮ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದು ಪ್ರಮುಖ ಸಭೆ, ಚುನಾವಣಾ ತಂತ್ರಗಾರಿಕೆ ಹಾಗೂ ಪತ್ರಿಕಾಗೋಷ್ಠಿಗಳು ಇಲ್ಲಿಯೇ ನಡೆಯುತ್ತಿದ್ದವು. ಅಂತಹ ಹೈ-ಪ್ರೊಫೈಲ್ ಕಚೇರಿಯನ್ನು ಈಗ ಟಿಎಂಸಿ ಅನಿವಾರ್ಯವಾಗಿ ಖಾಲಿ ಮಾಡಬೇಕಾಗಿ ಬಂದಿದೆ.

Edited By : Nagaraj Tulugeri
PublicNext

PublicNext

24/05/2026 07:22 pm

Cinque Terre

15.47 K

Cinque Terre

0

ಸಂಬಂಧಿತ ಸುದ್ದಿ