ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಅಂಗಡಿಯಲ್ಲಿ ಮಗುವನ್ನು ನಿಯಂತ್ರಿಸಲು ಹೇಳಿದ್ದಕ್ಕೆ ಭಾರತೀಯ ಕ್ಲರ್ಕ್ ಮುಖಕ್ಕೆ ಉಗುಳಿದ ವಿದೇಶಿ ಮಹಿಳೆ!

ಲಂಡನ್/ನ್ಯೂಯಾರ್ಕ್ (ಏಜೆನ್ಸಿ): ಸಣ್ಣ ವಿಷಯವೊಂದಕ್ಕೆ ಗ್ರಾಹಕಿಯೊಬ್ಬರು ಭಾರತೀಯ ಮೂಲದ ಉದ್ಯೋಗಿಯೊಬ್ಬರ ಮೇಲೆ ತೀವ್ರವಾಗಿ ಜಗಳವಾಡಿ, ಅಮಾನವೀಯವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

'@streetfight983' ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ 2.5 ನಿಮಿಷಗಳ ವಿಡಿಯೋದಲ್ಲಿ, ಕನ್ವೀನಿಯನ್ಸ್ ಸ್ಟೋರ್ (ದಿನಸಿ ಅಂಗಡಿ) ಒಂದರಲ್ಲಿ ಕಪ್ಪಿನ ವರ್ಣದ ಮಹಿಳೆಯೊಬ್ಬರು ಅಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಯುವಕನೊಂದಿಗೆ ತೀವ್ರವಾಗಿ ವಾಗ್ವಾದಕ್ಕಿಳಿದಿರುವುದು ಕಂಡುಬಂದಿದೆ.

ಅಂಗಡಿಯೊಳಗೆ ಆ ಮಹಿಳೆಯ ಮಗು ಎಲ್ಲೆಂದರಲ್ಲಿ ಓಡಾಡುತ್ತಾ ಗಲಾಟೆ ಮಾಡುತ್ತಿದ್ದಾಗ, ಉದ್ಯೋಗಿಯು "ದಯವಿಟ್ಟು ನಿಮ್ಮ ಮಗುವನ್ನು ನಿಯಂತ್ರಿಸಿ" ಎಂದು ಸೌಜನ್ಯದಿಂದ ಕೇಳಿಕೊಂಡಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಮಹಿಳೆ, ಸಣ್ಣ ವಿಷಯವನ್ನು ದೊಡ್ಡದಾಗಿ ಬೆಳೆಸಿ ಆತನ ಮೇಲೆ ಜಗಳ ಕಾಯಲು ಆರಂಭಿಸಿದ್ದಾಳೆ. ಅಷ್ಟಕ್ಕೇ ನಿಲ್ಲದೆ, ಆಕ್ರೋಶದ ಭರದಲ್ಲಿ ಆ ಭಾರತೀಯ ಕ್ಲರ್ಕ್‌ನ ಮುಖಕ್ಕೆ ಉಗುಳಿ ಅಸಭ್ಯವಾಗಿ ವರ್ತಿಸಿದ್ದಾಳೆ.

ಮಹಿಳೆ ಇಷ್ಟೊಂದು ಅಸಭ್ಯವಾಗಿ ಮತ್ತು ಆಕ್ರಮಣಕಾರಿಯಾಗಿ ನಡೆದುಕೊಂಡರೂ, ಆ ಭಾರತೀಯ ಕ್ಲರ್ಕ್ ತನ್ನ ತಾಳ್ಮೆ ಕಳೆದುಕೊಳ್ಳದೆ ಅತ್ಯಂತ ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಅವರು ಕೈ ಸನ್ನೆಯ ಮೂಲಕ ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾ, ಆಕೆಯನ್ನು ಅಂಗಡಿಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ಈ ಗದ್ದಲದ ನಡುವೆ ಮತ್ತೊಬ್ಬ ವ್ಯಕ್ತಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆ ಮಹಿಳೆಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. "ಕನಿಷ್ಠ ಸ್ವಯಂ ನಿಯಂತ್ರಣವಿಲ್ಲದ ಇಂತಹ ಗ್ರಾಹಕರಿಂದಾಗಿ ಚಿಲ್ಲರೆ ವ್ಯಾಪಾರ ಮಳಿಗೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ನೆಮ್ಮದಿ ಹಾಳಾಗುತ್ತಿದೆ," ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ವಿಶೇಷವಾಗಿ ವಿದೇಶಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಮತ್ತು ಏಷ್ಯನ್ ಮೂಲದ ಉದ್ಯೋಗಿಗಳು ದೈನಂದಿನ ಜೀವನದಲ್ಲಿ ಇಂತಹ ಮಾನಸಿಕ ಕಿರುಕುಳ ಹಾಗೂ ನಿಂದನೆಗಳನ್ನು ಎದುರಿಸಬೇಕಾಗುತ್ತಿದೆ ಎಂದು ಅನೇಕ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದು, ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

25/05/2026 03:13 pm

Cinque Terre

9.89 K

Cinque Terre

1

ಸಂಬಂಧಿತ ಸುದ್ದಿ