ಗುಜರಾತ್‌ನ ವಲ್ಸಾದ್ ಜಿಲ್ಲೆಯ ಕಲ್ವಾಡಾ ಚೌಕಡಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಎಚ್ಚರಿಕೆಯನ್ನು ನೀಡಿದೆ.
ಇನ್ನೂ ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಾಳಿಯಲ್ಲಿ ಫುಟ್‌ಬಾಲ್‌ನಂತೆ ಹಾರಿಬಿದ್ದಿದ್ದು, ಈ ಎದೆ ನಡುಗಿಸುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಒಂದು ಕ್ಷಣದ ಅಜಾಗರೂಕತೆ ಮತ್ತು ಅತಿ ವೇಗ ಹೇಗೆ ಮೃತ್ಯುವನ್ನು ಆಹ್ವಾನಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಬೈಕ್ ಸವಾರ ಮುಖ್ಯ ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿದ್ದ. ಆದರೆ, ಆತ ರಸ್ತೆಯ ಎರಡೂ ಬದಿಗಳಿಂದ ಬರುತ್ತಿದ್ದ ವಾಹನಗಳನ್ನು ಸರಿಯಾಗಿ ಗಮನಿಸದೆ ಅಚಾನಕ್ಕಾಗಿ ಬೈಕನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಅದೇ ಸಮಯದಲ್ಲಿ ಎದುರಿನಿಂದ ತನ್ನದೇ ವೇಗದಲ್ಲಿ ಬರುತ್ತಿದ್ದ ಐಷಾರಾಮಿ ಕಾರಿನ ಚಾಲಕ, ಬೈಕ್ ಸವಾರನನ್ನು ಕಂಡು ತಕ್ಷಣವೇ ಬ್ರೇಕ್ ಹಾಕಲು ಪ್ರಯತ್ನಿಸಿದ್ದರೂ, ಇಬ್ಬರ ನಡುವಿನ ಅಂತರ ತೀರಾ ಕಡಿಮೆ ಇದ್ದಿದ್ದರಿಂದ ಕಾರು ಭಾರಿ ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಬೈಕ್ ಸವಾರ ಸುಮಾರು 10 ಅಡಿಗೂ ಹೆಚ್ಚು ಎತ್ತರಕ್ಕೆ ಗಾಳಿಯಲ್ಲಿ ಹಾರಿ, ರಸ್ತೆಯ ಮತ್ತೊಂದು ಬದಿಗೆ ಬಿದ್ದಿದ್ದಾನೆ. ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ಭೀಕರ ಶಬ್ದ ಕೇಳುತ್ತಿದ್ದಂತೆ ಸುತ್ತಮುತ್ತಲಿನ ಅಂಗಡಿಕಾರರು ಮತ್ತು ದಾರಿಹೋಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಾರನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಈ ಹೃದಯ ಕಲಕುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಈ ಅಪಘಾತಕ್ಕೆ ಬೈಕ್ ಸವಾರನ ಆತುರ ಹಾಗೂ ಕಾರಿನ ಅತಿ ವೇಗ ಎರಡೂ ಕಾರಣ ಎನ್ನಲಾಗುತ್ತಿದೆ.
ಯಾವುದೇ ಜಂಕ್ಷನ್ ಅಥವಾ ಚೌಕಡಿಗಳಲ್ಲಿ ರಸ್ತೆ ದಾಟುವಾಗ ವಾಹನವನ್ನು ಸಂಪೂರ್ಣವಾಗಿ ನಿಲ್ಲಿಸಿ, ಎರಡೂ ಕಡೆ ವಾಹನಗಳ ಸಂಚಾರವನ್ನು ಖಚಿತಪಡಿಸಿಕೊಂಡು ನಂತರವೇ ರಸ್ತೆ ದಾಟಬೇಕು. ನಿಮ್ಮ ಜೀವ ನಿಮ್ಮ ಕುಟುಂಬಕ್ಕೆ ಅತ್ಯಮೂಲ್ಯ.
PublicNext
25/05/2026 04:20 pm