ಭಟ್ಕಳ: ಭಟ್ಕಳ ಮುರಿನಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಮೀನುಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುರಿನಕಟ್ಟೆ ವಿಚಾರ ಈಗ ರಾಜಕೀಯವಾಗಿ ಪ್ರಸ್ತಾಪವಾಗುತ್ತಿರುವುದಕ್ಕೆ ಪ್ರಶ್ನೆ ಎತ್ತಿದ ಅವರು, ಈ ವಿವಾದದ ಬೇರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಇದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವೈದ್ಯ, “ಮುರಿನಕಟ್ಟೆ ವಿವಾದ ಇದ್ದದ್ದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಮಾಜಿ ಶಾಸಕ ಸುನೀಲ್ ನಾಯ್ಕ್ ಶಾಸಕರಾಗಿದ್ದಾಗಲೇ.
ಆಗ ಈ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರು ಎನ್ನುವ ಸಂಶಯ ಇದೆ. ಆಗ ಸುಮ್ಮನಿದ್ದವರು ಈಗ ಯಾಕೆ ಗದ್ದಲ-ಗಲಾಟೆ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
“ನಾನು ದೇವಸ್ಥಾನ ಕಟ್ಟುವವನು. ಮುರಿನಕಟ್ಟೆ ಸೇರಿದಂತೆ ಎಲ್ಲವನ್ನೂ ಶಾಸ್ತ್ರೋಕ್ತವಾಗಿ ನಿರ್ಮಿಸುತ್ತೇನೆ. ದೇವಸ್ಥಾನ ಕೆಡವುವವನಲ್ಲ. ಮುರಿನಕಟ್ಟೆ ಇದ್ದ ಜಾಗದಲ್ಲಿಯೇ ಅಥವಾ ಅದೇ ಸ್ಥಳದ ಸಮೀಪ ಶಾಸ್ತ್ರಬದ್ಧವಾಗಿ ಕಟ್ಟಿಸುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರು ಈ ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಸಚಿವ ವೈದ್ಯ, “ಬಿಜೆಪಿ ನಾಯಕರಿಗೆ ರಾಜಕೀಯ ಹೊರತುಪಡಿಸಿ ಬೇರೆ ಏನೂ ಕಾಣುತ್ತಿಲ್ಲ” ಎಂದು ಕಿಡಿಕಾರಿದರು.
ಇದೇ ವೇಳೆ ಧಾರ್ಮಿಕ ನಂಬಿಕೆಗಳ ಕುರಿತು ಮಾತನಾಡಿದ ಅವರು, “ಇದು ದೇವ-ದೈವಗಳ ಸ್ಥಾನ. ಇಲ್ಲಿ ದೇವರ ವಿಚಾರದಲ್ಲಿ ಅನ್ಯಾಯ ಅಥವಾ ರಾಜಕೀಯ ಮಾಡಿದರೆ ಸರ್ವಸ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ನಾನೂ ದೇವರ ವಿಚಾರದಲ್ಲಿ ರಾಜಕೀಯ ಮಾಡಿದರೆ ನನಗೂ ಕಂಟಕ ತಪ್ಪುವುದಿಲ್ಲ” ಎಂದು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದರು.
PublicNext
30/05/2026 07:11 am
LOADING...