ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ತಟ್ಟಿಹಕ್ಕಲು ದುರಂತ ಸಂತ್ರಸ್ತರಿಗೆ ಪರಿಹಾರ ವಿತರಣೆ; ಸಚಿವ ಮಂಕಾಳ ವೈದ್ಯರಿಂದ ಅನಾಥ ಮಕ್ಕಳಿಗೆ ಮನೆ, ಶಿಕ್ಷಣದ ಭರವಸೆ

ಭಟ್ಕಳ: ಭಟ್ಕಳ ತಾಲೂಕಿನ ತಟ್ಟಿಹಕ್ಕಲು ಸಮುದ್ರ ತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದ ವೇಳೆ 11 ಮಂದಿ ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ಇಂದು ಸಚಿವ ಮಂಕಾಳ ವೈದ್ಯ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಪರಿಹಾರದ ಚೆಕ್ ವಿತರಿಸಿದರು.

ಪರಿಹಾರ ವಿತರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ, ಮೃತರ ಕುಟುಂಬಗಳ ದುಃಖದಲ್ಲಿ ಸರ್ಕಾರ ಅವರೊಂದಿಗೆ ಇದೆ ಎಂದು ಹೇಳಿದರು. ಸರ್ಕಾರದಿಂದ ₹5 ಲಕ್ಷ, ಮೀನುಗಾರಿಕಾ ಇಲಾಖೆಯಿಂದ ₹10 ಲಕ್ಷ, ತಮ್ಮ ವೈಯಕ್ತಿಕ ನೆರವಿನ ರೂಪದಲ್ಲಿ ತಲಾ ₹1 ಲಕ್ಷ ಹಾಗೂ ತಮ್ಮ ಜನತಾ ಸಹಕಾರ ಬ್ಯಾಂಕ್ ವತಿಯಿಂದ ₹50 ಸಾವಿರ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.

ಘಟನೆಯಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ಸಚಿವರು ಘೋಷಿಸಿದರು. “ಆ ಮಕ್ಕಳು ಎಷ್ಟು ಓದಲು ಬಯಸುತ್ತಾರೋ ಅಷ್ಟರವರೆಗೆ ಅವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ” ಎಂದು ಹೇಳಿದರು.

ಅಲ್ಲದೆ, ಅನಾಥ ಮಕ್ಕಳ ಕುಟುಂಬಕ್ಕೆ ಮನೆ ನಿರ್ಮಾಣಕ್ಕಾಗಿ ಈಗಾಗಲೇ ₹5 ಲಕ್ಷ ನೆರವು ನೀಡಿರುವುದಾಗಿ ತಿಳಿಸಿದ ಅವರು, ಇದೇ ವರ್ಷ ಅವರಿಗೆ ಒಂದು ಸ್ವಂತ ಮನೆ ಕಟ್ಟಿಕೊಡುವ ಭರವಸೆಯನ್ನೂ ನೀಡಿದರು. ಕುಟುಂಬದ ಸದಸ್ಯರಿಗೆ ಸಹಕಾರಿ ಬ್ಯಾಂಕ್‌ಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಇದೇ ವೇಳೆ ತಮ್ಮ ಜನ್ಮದಿನದ ಕುರಿತೂ ಮಾತನಾಡಿದ ಸಚಿವರು, “ನನ್ನ ಹುಟ್ಟುಹಬ್ಬ ಜೂನ್ 5ರಂದು ಇದೆ. ಆದರೆ, ಈ ದುರ್ಘಟನೆಯ ನೋವಿನ ಹಿನ್ನೆಲೆಯಲ್ಲಿ ಈ ವರ್ಷ ಜನ್ಮದಿನ ಆಚರಣೆ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದರು.

ಪರಿಹಾರ ಚೆಕ್ ವಿತರಣೆಯ ವೇಳೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Edited By :
PublicNext

PublicNext

29/05/2026 10:47 pm

Cinque Terre

16.68 K

Cinque Terre

0

ಸಂಬಂಧಿತ ಸುದ್ದಿ