ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಅಧಿಕ ಮಾಸದಲ್ಲಿ ದೇವಾರಾಧನೆಗೆ ಬಹುಪಟ್ಟು ಫಲ : ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು

ಭಟ್ಕಳ: ಅಧಿಕ ಮಾಸದಲ್ಲಿ ಕಾಮ್ಯ ವ್ರತಗಳನ್ನು ಆಚರಿಸುವುದಿಲ್ಲ. ಈ ಮಾಸಕ್ಕೆ ದೇವರೇ ಅಧಿಪತಿಯಾಗಿರುವುದರಿಂದ ಈ ಅವಧಿಯಲ್ಲಿ ಮಾಡುವ ದೇವಕಾರ್ಯಗಳು ಮತ್ತು ಆರಾಧನೆಗಳಿಗೆ ಬಹುಪಟ್ಟು ಫಲ ದೊರೆಯುತ್ತದೆ ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.

ಭಟ್ಕಳದ ವಡೇರ ಮಠದಲ್ಲಿ ಮೊಕ್ಕಾಂ ದಯಪಾಲಿಸಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಮಾನವ ಜನ್ಮವನ್ನು ದೇವರು ಕರುಣಿಸಿದ್ದಾನೆ. ಆದ್ದರಿಂದ ದೇವರ ನಾಮಸ್ಮರಣೆ ಮಾಡಿ, ಆತನ ಉಪಕಾರವನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿದರು.

ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ನಿರ್ಮಾಣಕ್ಕೆ ಹಲವು ದೇಶಗಳ ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ತಂತ್ರಜ್ಞರ ಪರಿಶ್ರಮ ಅಗತ್ಯವಾಗುತ್ತದೆ. ಡೇಟಾ ಸಂಗ್ರಹ, ಬ್ಯಾಕ್‌ಅಪ್, ಕೂಲಿಂಗ್ ವ್ಯವಸ್ಥೆ ಸೇರಿದಂತೆ ಅನೇಕ ಹಂತಗಳಲ್ಲಿ ಪರಿಣಿತರ ಸೇವೆ ಬೇಕಾಗುತ್ತದೆ. ಆದರೆ ಮಾನವನ ಸೃಷ್ಟಿಗೆ ಕಾರಣಕರ್ತನಾದ ದೇವರು ಒಬ್ಬನೇ. ಅಲ್ಲಿ ಅಂತರ್ಜಾಲವೂ ಇಲ್ಲ, ತಂತ್ರಜ್ಞಾನವೂ ಇಲ್ಲ. ಆದ್ದರಿಂದ ಎಐಗಿಂತ ಜಿಐ (ಗಾಡ್ಸ್ ಇಂಟೆಲಿಜೆನ್ಸ್) ಅತ್ಯುನ್ನತವಾದುದು ಎಂದು ಶ್ರೀಗಳು ಹೇಳಿದರು.

ದೇವರು ಕೇವಲ ಮಾನವನಷ್ಟೇ ಅಲ್ಲ, ಸಕಲ ಜೀವಜಾಲಗಳ ಉಗಮಕ್ಕೂ ಕಾರಣನಾಗಿದ್ದಾನೆ. ಆತನ ಆರಾಧನೆ ಮತ್ತು ಉಪಾಸನೆಯ ಮೂಲಕ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಆರಾಧನೆಗೆ ಅಧಿಕ ಮಾಸವು ಅತ್ಯುತ್ತಮ ಅವಕಾಶ ಒದಗಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಠದ 1475 ವರ್ಷಗಳ ಪರಂಪರೆಯಲ್ಲಿ ಸಂಸ್ಥಾಪಕರಾದ ಶ್ರೀ ನಾರಾಯಣ ತೀರ್ಥರು ಭಟ್ಕಳಕ್ಕೆ ತಂದು ಪೂಜಿಸಿದ್ದ ರಾಮವೀರ ವಿಠಲ ದೇವರನ್ನು ಮತ್ತೆ ಪೂಜಿಸುವ ಅವಕಾಶ ದೊರೆತಿರುವುದು ಎಲ್ಲರಿಗೂ ಭಾಗ್ಯವಾಗಿದೆ. ದೇವರ ಅಸ್ತಿತ್ವವನ್ನು ಅರಿತು ಭಕ್ತಿಭಾವದಿಂದ ಆರಾಧಿಸಿದಾಗ ಆತನ ಕೃಪೆ ಮತ್ತು ರಕ್ಷಣೆ ಲಭಿಸುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಭಟ್ಕಳದಲ್ಲಿ ಸಂಭವಿಸಿದ ಕಪ್ಪೆಚಿಪ್ಪು ದುರಂತದಲ್ಲಿ ಮೃತಪಟ್ಟವರಿಗೆ ಸದ್ಗತಿ ದೊರೆಯಲೆಂದು ರಾಮವೀರ ವಿಠಲ ದೇವರಲ್ಲಿ ಪ್ರಾರ್ಥಿಸುತ್ತೇವೆ. ತಾಯಂದಿರನ್ನು ಕಳೆದುಕೊಂಡ ದುಃಖ ಕುಟುಂಬದ ಬದುಕನ್ನೇ ಅಸ್ಥಿರಗೊಳಿಸುತ್ತದೆ. ದೇವರು ಕುಟುಂಬಗಳನ್ನು ರಕ್ಷಿಸಿ, ದುಃಖಿತ ಕುಟುಂಬಗಳಿಗೆ ಧೈರ್ಯ ತುಂಬಲಿ ಎಂದು ಆಶಿಸಿದರು.

ಅಧಿಕ ಮಾಸದಲ್ಲಿ ಹೆಚ್ಚಿನ ಸಮಯವನ್ನು ದೇವರ ನಾಮಸ್ಮರಣೆ, ಪೂಜೆ, ಜಪ, ಪಾರಾಯಣ ಹಾಗೂ ಸತ್ಸಂಗಗಳಲ್ಲಿ ಕಳೆಯುವುದರಿಂದ ಆತ್ಮಿಕ ಶಾಂತಿ ಮತ್ತು ಮನೋಬಲ ವೃದ್ಧಿಯಾಗುತ್ತದೆ. ದೇವರ ಮೇಲಿನ ಭಕ್ತಿ ಮತ್ತು ನಂಬಿಕೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎದುರಿಸಲು ಶಕ್ತಿಯನ್ನು ನೀಡುತ್ತದೆ ಎಂದು ಶ್ರೀಗಳು ತಿಳಿಸಿದರು. ಸದಾ ದೇವರ ಸಾನ್ನಿಧ್ಯದಲ್ಲಿ ಇದ್ದರೆ ಭಯ, ಆತಂಕ ಮತ್ತು ಅನಿಶ್ಚಿತತೆಗಳು ದೂರವಾಗುತ್ತವೆ. ಭಕ್ತಿಭಾವದಿಂದ ದೇವರನ್ನು ಆರಾಧಿಸುವ ಮೂಲಕ ಜೀವನ ಸಾರ್ಥಕವಾಗುತ್ತದೆ ಎಂದು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಭಕ್ತರಿಗೆ ಆಶೀರ್ವಚನ ನೀಡಿದರು.

Edited By : PublicNext Desk
Kshetra Samachara

Kshetra Samachara

02/06/2026 05:50 pm

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ