ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಮೂರಿನಕಟ್ಟೆ ವಿವಾದಕ್ಕೆ ತೆರೆ - ಮೂಲ ಸ್ಥಳದಲ್ಲೇ ಮರುನಿರ್ಮಾಣಕ್ಕೆ ಒಪ್ಪಿಗೆ - ಸಂಸದ ಕಾಗೇರಿ

ಭಟ್ಕಳ, ಜೂನ್ 2: ರಾಷ್ಟ್ರೀಯ ಹೆದ್ದಾರಿ-66 ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಉಂಟಾಗಿದ್ದ ಮೂರಿನಕಟ್ಟೆ ವಿವಾದಕ್ಕೆ ಅಂತಿಮ ತೆರೆ ಬಿದ್ದಿದ್ದು, ಮೂಲ ಮೂರಿನಕಟ್ಟೆಯನ್ನು ರಸ್ತೆ ವಿಭಜಕ (ಡಿವೈಡರ್) ಪ್ರದೇಶದಲ್ಲಿಯೇ ಯಥಾಸ್ಥಿತಿಯಲ್ಲಿ ಮರುನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಎನ್‌ಎಚ್‌ಎಐ ಅಧಿಕಾರಿಗಳು ಹಾಗೂ ವಿವಿಧ ಹಿಂದೂ ಸಂಘಟನೆಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.

ಮೇ 24ರಂದು ಹೆದ್ದಾರಿ ಅಗಲೀಕರಣ ಕಾಮಗಾರಿಯ ಕಾರಣದಿಂದ ಸ್ಥಳಾಂತರಗೊಂಡಿದ್ದ ಮೂರಿನಕಟ್ಟೆಯನ್ನು ಪಕ್ಕದ ಜಾಗದಲ್ಲಿ ಮರುನಿರ್ಮಿಸಲಾಗಿತ್ತು. ಆದರೆ ಅದೇ ದಿನ ಸಂಜೆ ಕೆಲವರು ಕಟ್ಟೆಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದ್ದು, ಬಳಿಕ ಈ ವಿಷಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ವಿವಿಧ ಅಭಿಪ್ರಾಯಗಳನ್ನು ಪರಿಗಣಿಸಿ, ಧಾರ್ಮಿಕ ಭಾವನೆಗಳ ಜೊತೆಗೆ ಸಂಚಾರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಮೂಲ ಸ್ಥಳದಲ್ಲೇ ಮೂರಿನಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಕಾಗೇರಿ ವಿವರಿಸಿದರು.

ಸುಮಾರು 120 ಚದರ ಅಡಿ ವಿಸ್ತೀರ್ಣದಲ್ಲಿ, ಏಳು ಅಡಿ ಉದ್ದದ ಕಟ್ಟೆ ನಿರ್ಮಿಸಲಾಗುವುದು. ಅಗತ್ಯ ಸುರಕ್ಷತಾ ಕ್ರಮಗಳು, ಬೆಳಕಿನ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಯೋಜನೆಯ ತಾಂತ್ರಿಕ ಹಾಗೂ ಕಾನೂನುಬದ್ಧ ರೂಪರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಅಂತಿಮ ನೀಲನಕ್ಷೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದರು.

ಇದೇ ವೇಳೆ, ಎನ್‌ಎಚ್‌ಎಐ ವ್ಯಾಪ್ತಿಯ ಅರಣ್ಯ ಮತ್ತು ಕಂದಾಯ ಇಲಾಖೆಯ ಜಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಬೇ ನಿರ್ಮಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ. ಇದರಿಂದ ಅತಿಕ್ರಮಣ ತಡೆಯುವ ಜೊತೆಗೆ ಹೆದ್ದಾರಿ ಸಂಚಾರ ವ್ಯವಸ್ಥೆ ಸುಧಾರಣೆಗೆ ನೆರವಾಗಲಿದೆ ಎಂದು ತಿಳಿಸಿದರು.

ಜೂನ್ 5ರಂದು ಹಿಂದೂ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕಾಗೇರಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಹೋರಾಟ ನಡೆಸುವ ಹಕ್ಕಿದೆ. ಹಿಂದೂತ್ವ ಯಾರೊಬ್ಬರ ಅಥವಾ ಯಾವುದೇ ರಾಜಕೀಯ ಪಕ್ಷದ ಗುತ್ತಿಗೆಯಲ್ಲ. ಸಮಾಜದ ವಿಚಾರಗಳಲ್ಲಿ ಹಿಂದೂಪರ ಸಂಘಟನೆಗಳು ಧ್ವನಿ ಎತ್ತುವುದು ಸ್ವಾಗತಾರ್ಹ ಎಂದು ಹೇಳಿದರು.

ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಮೂರಿನಕಟ್ಟೆ ಮರುನಿರ್ಮಾಣದ ತೀರ್ಮಾನವನ್ನು ಸ್ವಾಗತಿಸಿದರು. ಆದರೆ ಘಟನೆಯ ವೇಳೆ ನಡೆದ ಹಲ್ಲೆ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಮಾಯಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಗೋವಿಂದ ನಾಯ್ಕ ಮಾತನಾಡಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ವಿಶ್ವಾಸದ ವಾತಾವರಣ ಉಳಿಯಬೇಕಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಗೂ ಮುನ್ನ ಕಾಗೇರಿ, ಸುನೀಲ ನಾಯ್ಕ ಹಾಗೂ ಬಿಜೆಪಿ ಮುಖಂಡರು ಮೂರಿನಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ರಸ್ತೆ ವಿಭಜಕ ಪ್ರದೇಶ ಹಾಗೂ ಸುತ್ತಮುತ್ತಲಿನ ಜಾಗವನ್ನು ಪರಿಶೀಲಿಸಿ ಮರುನಿರ್ಮಾಣದ ನೀಲನಕ್ಷೆ ಕುರಿತು ಚರ್ಚಿಸಿದರು.

ಶಿರಾಲಿ ಸಮೀಪದ ಪಳ್ಳಿಹೊಳೆಯಲ್ಲಿ ನಡೆದ ಚಿಪ್ಪುಕಲ್ಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವು ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ಈ ಬಗ್ಗೆ ಯಾವುದೇ ಪ್ರಸ್ತಾವನೆ ಬಂದರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಈಗಾಗಲೇ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ನೆರವು ಘೋಷಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೋವಿಂದ ನಾಯ್ಕ, ಸುಬ್ರಾಯ ದೇವಾಡಿಗ, ಕೇದಾರ ಕೊಲ್ಲೆ, ರಾಜೇಶ್ ನಾಯ್ಕ, ದಿನೇಶ್ ನಾಯ್ಕ, ಶ್ರೀಕಾಂತ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ, ಭಾಸ್ಕರ ದೈಮನೆ, ಶ್ರೀನಿವಾಸ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By :
PublicNext

PublicNext

02/06/2026 08:49 pm

Cinque Terre

5.49 K

Cinque Terre

0

ಸಂಬಂಧಿತ ಸುದ್ದಿ