ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಸಿರಿಧಾನ್ಯ ಮರೆತರೆ ರೋಗ ಖಚಿತ: ಅಕ್ಕಿ-ಗೋಧಿ ಅಪಾಯದ ಬಗ್ಗೆ ಡಾ. ಖಾದರ್‌ ವಲಿ ಎಚ್ಚರಿಕೆ

ಭಟ್ಕಳ: ಕಾರ್ಪೊರೇಟ್ ಕಂಪನಿಗಳು ತಮ್ಮ ಲಾಭಕ್ಕಾಗಿ ಜನರಿಗೆ ಅಕ್ಕಿ, ಗೋಧಿ ತಿನ್ನಿಸಿ ಅವರನ್ನು ಕಾಯಿಲೆಗಳಿಗೆ ದೂಡುವ ಮೂಲಕ ದೀರ್ಘಾವಧಿ ಲಾಭ ಗಳಿಸುತ್ತಿವೆ ಎಂದು ಆಹಾರ ವಿಜ್ಞಾನಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಖಾದರ್‌ ವಲಿ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ನಾಗಯಕ್ಷೆ ಸಭಾಭವನದಲ್ಲಿ ನಡೆದ 'ಆಹಾರವೇ ಆರೋಗ್ಯ' ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಇಂದು ನಾವು ಸೇವಿಸುವ ಆಹಾರವೇ ನಮಗೆ ರೋಗವಾಗಿ ಪರಿಣಮಿಸಿದೆ," ಎಂದು ಎಚ್ಚರಿಕೆ ನೀಡಿದರು.

ಹಿಂದಿನ ಕಾಲದಲ್ಲಿ ಜನರು ಅಕ್ಕಿ, ಗೋಧಿಯನ್ನು ಹೆಚ್ಚಾಗಿ ಸೇವಿಸುತ್ತಿರಲಿಲ್ಲ. ಬದಲಾಗಿ ಸಿರಿಧಾನ್ಯಗಳನ್ನೇ ಪ್ರಧಾನ ಆಹಾರವಾಗಿ ಬಳಸುತ್ತಿದ್ದರು. ಸಿರಿಧಾನ್ಯಗಳಲ್ಲಿರುವ ನಾರಿನಾಂಶದ ಬಳಕೆಯಿಂದ ಸ್ವಸ್ಥ ಮತ್ತು ಕಾಯಿಲೆ ಮುಕ್ತ ಜೀವನ ನಡೆಸುತ್ತಿದ್ದರು ಎಂದು ಡಾ. ಖಾದರ್ ವಲಿ ವಿವರಿಸಿದರು. ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಹಾಗೂ ಪಟ್ಟಣದ ಜನರಿಗೆ ಒಂದೇ ತರಹದ ಕಾಯಿಲೆಗಳು ಬಾಧಿಸುತ್ತಿವೆ. ವಿದೇಶಿ ಕಂಪೆನಿಗಳು ಪೇಟೆಂಟ್ ಮೂಲಕ ನಮ್ಮನ್ನು ಆಳುತ್ತಿವೆ. ಕಾರ್ಪೊರೇಟ್ ಮಾಯಾಜಾಲಕ್ಕೆ ಸಿಲುಕಿದ ನಾವು ಅಕ್ಕಿ, ಗೋಧಿ ತಿಂದು ನಮ್ಮ ದೇಹದ ಸಕ್ಕರೆ ಮಟ್ಟವನ್ನು ಹೆಚ್ಚಿಸಿಕೊಂಡು ಕಾಯಿಲೆಗೆ ತುತ್ತಾಗಿ ದೀರ್ಘಾವಧಿ ಚಿಕಿತ್ಸೆಯಿಂದ ಬಳಲುತ್ತಿದ್ದೇವೆ ಎಂದು ಅವರು ವಿಷಾದಿಸಿದರು. ಇಂದು ನಾವು ಬೇಗ ಕಾಯಿಲೆ ಬರುವಂತಹ ಆಹಾರವನ್ನು ಸೇವಿಸುತ್ತಿದ್ದೇವೆ ಎಂದು ಅವರು ಪುನರುಚ್ಚರಿಸಿದರು.

ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಮಾತನಾಡಿ, ಸಾವಯವ ಕೃಷಿ ಬೇಸಾಯದಿಂದ ಬೆಳೆದ ಬೆಳೆಕಾಳುಗಳು ದುಬಾರಿಯಾದರೂ ಕಲಬೆರಕೆ ಮುಕ್ತವಾಗಿರುತ್ತವೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೆಡಿಮೇಡ್ ಆಹಾರಗಳು ವಿಷ ಪದಾರ್ಥಗಳಾಗಿದ್ದು, ಆರೋಗ್ಯಕರ ಜೀವನ ನಡೆಸಲು ವಿಷಯುಕ್ತ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆಹಾರ ವಿಜ್ಞಾನಿ ಡಾ. ಖಾದರ್ ವಲಿ, ಯೋಗಗುರು ಗೋವಿಂದ ಗುರೂಜಿ, ಡಾ. ಸುನೀಲ ಜತ್ತಣ್ಣ, ಪ್ರಕಾಶ ಹೊಳ್ಳೆರಿ ಹಾಗೂ ಆಹಾರ ತಜ್ಞೆ ಅರುಣಾ ತಿಮ್ಮಾಪುರ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು. ಸ್ಪಂದನಾ ಚಾರಿಟೇಬಲ್ ಅಧ್ಯಕ್ಷ ರಾಘವೇಂದ್ರ ನಾಯ್ಕ, ಕಿರಣ ಕಾಯ್ಕಿಣಿ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ರಮೇಶ ಖಾರ್ವಿ, ನಿತಿನ್ ನಾಯ್ಕ, ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಾಸು ನಾಯ್ಕ, ಸ್ವಾಮಿ ವಿವೇಕಾನಂದ ಚಾರಿಟೇಬಲ್ ಅಧ್ಯಕ್ಷ ವಸಂತ ನಾಯ್ಕ ಜಾಲಿ, ಜಯರಾಜ ಮೊಗೇರ, ವಿಷ್ಣು ನಾಯ್ಕ, ಭಟ್ಕಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್‌. ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ಮೆಸ್ಕಾಂ ಎಂಜಿನಿಯರ್ ಶಿವಾನಂದ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/06/2026 08:30 pm

Cinque Terre

1.36 K

Cinque Terre

0

ಸಂಬಂಧಿತ ಸುದ್ದಿ