ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರದ ಹೆಮ್ಮೆಯ ಪುತ್ರಿ ರಾಜೇಶ್ವರಿ ಹೆಗಡೆ ಹೈಕೋರ್ಟ್ ನ್ಯಾಯಾಧೀಶರು!

ಸಿದ್ದಾಪುರ: ತಾಲೂಕಿನ ಹಲಗೇರಿ ಗ್ರಾಮದ ಶ್ರೀಮತಿ ರಾಜೇಶ್ವರಿ ನಾರಾಯಣ ಹೆಗಡೆ ಅವರು ಬೆಂಗಳೂರು ಉಚ್ಛನ್ಯಾಯಾಲಯದ ನ್ಯಾಯಾಧೀಶರಾಗಿ ಸೋಮವಾರ (01-06-2026) ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರು ಹೈಕೋರ್ಟಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಶ್ರೀಮತಿ ರಾಜೇಶ್ವರಿ ಹೆಗಡೆಯವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ರಾಜೇಶ್ವರಿ ಹೆಗಡೆಯವರು ನ್ಯಾಯಾಂಗ ಕ್ಷೇತ್ರದಲ್ಲಿ ತಾವು ನಡೆದುಬಂದ ದಾರಿಯನ್ನು ಸ್ಮರಿಸಿಕೊಂಡು ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

 ಹಲಗೇರಿಯ ನಾರಾಯಣ ಹೆಗಡೆ ಹಾಗೂ ಶ್ರೀಮತಿ ಬಾಗೀರಥಿ ಹೆಗಡೆ ದಂಪತಿಗಳ ಮಗಳಾಗಿ ಜನಿಸಿದ ರಾಜೇಶ್ವರಿಯವರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಹುಟ್ಟಿದೂರಿನಲ್ಲಿಯೇ ಪಡೆದರು. ಸಿದ್ದಾಪುರದ ಎಂಜಿಸಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಇವರು ಧಾರವಾಡ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಗಳಿಸಿದರು. ಪ್ರಾರಂಭಿಕ ಹಂತದಲ್ಲಿ ಸಿದ್ದಾಪುರ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಕೈಗೊಂಡ ಇವರು ನಂತರ ಬೆಂಗಳೂರಿಗೆ ತೆರಳಿ ಉಚ್ಛನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸಿದರು.

 1998 ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ರಾಜೇಶ್ವರಿ ಹೆಗಡೆಯವರು 2006 ರಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ, 2014 ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದರು. ಮೈಸೂರು, ರಾಮನಗರ, ಬೆಂಗಳೂರು, ರಾಯಚೂರು, ಮಂಡ್ಯ, ದಾವಣಗೆರೆ ಹಾಗೂ ಚಿಕ್ಕಮಗಳೂರುಗಳ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ದಕ್ಷತೆ ತೋರಿದ ಇವರು ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಬದ್ಧ ತೀರ್ಮಾನ ನೀಡುವ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ. ಇದೀಗ ರಾಜೇಶ್ವರಿ ಹೆಗಡೆಯವರು ಬೆಂಗಳೂರು ಹೈಕೋರ್ಟಿನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಸಿದ್ದಾಪುರ ತಾಲೂಕಿಗೆ ಹೆಮ್ಮೆಯ ಸಂಗತಿ.

Edited By : PublicNext Desk
PublicNext

PublicNext

02/06/2026 02:09 pm

Cinque Terre

2.64 K

Cinque Terre

0

ಸಂಬಂಧಿತ ಸುದ್ದಿ