ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ತೀವ್ರಗೊಂಡ ಲಾಬಿ! ಭಾನುವಾರವೂ ಡಿಕೆಶಿ ನಿವಾಸಕ್ಕೆ ಶಾಸಕರ ದಂಡು

ಬೆಂಗಳೂರು: ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಜೂನ್.3 ರಂದು ಗೋದೂಳಿ ಸಮಯದಲ್ಲಿ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, 'ಡಿಕೆ' ನೇತೃತ್ವದ ನೂತನ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಭಾನುವಾರವಾದರೂ ಹಲವು ಶಾಸಕರು ಡಿಕೆಶಿ ಅವರ ಸದಾಶಿವನಗರದ ನಿವಾಸಕ್ಕೆ ದಾಂಗುಡಿ ಇಡುವ ಮೂಲಕ ಲಾಬಿಯೂ ತೀವ್ರಗೊಂಡಂತೆ ಕಂಡು ಬಂತು.

'ಡಿಕೆ' ಜೊತೆ ಎಷ್ಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸುವರು?

ಇಲ್ಲಿ ಮೂರು ಅವಕಾಶಗಳಿವೆ. ಅವುಗಳೆಂದರೆ, ಒಂದು ಡಿ. ಕೆ.ಶಿವಕುಮಾರ್ ಅವರು ಸಿಎಂ ಆಗಿ ಒಬ್ಬರೇ ಪ್ರಮಾಣ ಸ್ವೀಕರಿಸುವುದು.‌ ಎರಡನೆಯದು ಸದ್ಯಕ್ಕೆ ತುರ್ತಾಗಿ 10-12 ಮಂದಿ ಹಿರಿಯರಿಗೆ ಸಚಿವ ಸ್ಥಾನದ ಅವಕಾಶ ಮಾಡಿಕೊಟ್ಟು ಸಿಎಂ 'ಡಿಕೆ' ಅವರೊಂದಿಗೇ ರಾಜ್ಯಪಾಲರಿಂದ ಪ್ರಮಾಣ ಪಡೆಯುವುದು. ಇನ್ನು ಮೂರನೇಯದು ಎಂದರೆ, ಮೂವತ್ನಾಲ್ಕು ಮಂದಿ ಸಚಿವರು ಸಿಎಂ ಅವರ ಪ್ರಮಾಣದ ಬಳಿಕ ಒಂದೇ ದಿನ ಪ್ರಮಾಣ ವಚನವನ್ನು ತೆಗೆದುಕೊಳ್ಳುವುದು !

ಈ ಹಿಂದಿನ ಸರ್ಕಾರಗಳು ರಚನೆಯಾದ ಸಂದರ್ಭದಲ್ಲಿ ಈ ಮೇಲಿನ ಮೂರು ಪ್ರಕಾರದ ಸಚಿವ ಸಂಪುಟ ರಚನೆ ಮತ್ತು ಪ್ರಮಾಣ ವಚನಗಳು ನಡೆದದ್ದುಂಟು. ಆದರೆ,‌ ಡಿಕೆ ಶಿವಕುಮಾರ್ ಅವರು ಈ ಪೈಕಿ ಎರಡನೇ 'ಆಪ್ಷನ್' ಅನ್ನು ಆರಿಸಿಕೊಳ್ಳಬಹುದೇನೋ. ಅಂದರೆ ತಮ್ಮೊಂದಿಗೆ 10-12 ಮಂದಿ ಸಚಿವರು ಒಂದೇ ದಿನ ಪ್ರಮಾಣ ವಚನವನ್ನು ಪಡೆಯುವುದು. ಹಾಗಾದರೆ, ಮೊದಲ ಅವಧಿಯಲ್ಲೇ ಡಿಕೆಶಿ ಅವರ ಸಂಪುಟಕ್ಕೆ ಸೇರಿ ಸಚಿವರಾಗಲಿರುವವರು ಯಾರು? ಅಂತಾ ಕೇಳಿದಾಗ ಕಾಂಗ್ರೆಸ್‌ನ ಮೂಲಗಳ ಪ್ರಕಾರ, ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ, ಯು. ಟಿ.ಖಾದರ್ ಅಥವಾ ಜಮೀರ್ ಅಹ್ಮದ್, ರಾಮಲಿಂಗಾರೆಡ್ಡಿ ಅಥವಾ ಎಚ್.ಕೆ.ಪಾಟೀಲ್, ಮಧು ಬಂಗಾರಪ್ಪ ಅಥವಾ ಬಿ.ಕೆ.ಹರಿಪ್ರಸಾದ್, ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಲಕ್ಷ್ಮಣ್ ಸವದಿ, ರೂಪಕಲಾ ಶಶಿಧರ್, ಅಪ್ಪಾಜಿ ನಾಡಗೌಡ, ಸಂತೋಷ್ ಲಾಡ್, ಡಾ.ಶರಣಪ್ರಕಾಶ್ ಪಾಟೀಲ್ ಎಂದು ಹೇಳಲಾಗುತ್ತಿದೆ.

ಇದರಲ್ಲಿ ಜಾತಿ, ವರ್ಗ, ಪ್ರಾದೇಶಿಕತೆ, ಸೀನಿಯಾರಿಟಿ, ಹೈಕಮಾಂಡ್ ಕೋಟಾ, ಸಿದ್ದರಾಮಯ್ಯ ಕೋಟಾಗಳೂ ಸೇರಿವೆ!

ಇನ್ನು, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಸತೀಶ್ ಜಾರಕಿಹೊಳಿ ಹೆಸರು ಚಾಲ್ತಿಯಲ್ಲಿದ್ದರೂ ಲಿಂಗಾಯತ ಸಮುದಾಯದ ಅಪ್ಪಾಜಿ ನಾಡಗೌಡರ ಹೆಸರೂ ಇದೀಗ ಮುನ್ನೆಲೆಗೆ ಬಂದಿದೆ. ಯು.ಟಿ.ಖಾದರ್ ಸ್ಪೀಕರ್ ಸ್ಥಾನಕ್ಕಿಂತ ಸಚಿವ ಸ್ಥಾನಕ್ಕೇ ಹೆಚ್ಚು ಆಸೆ ವ್ಯಕ್ತಪಡಿಸಿದ್ದರಿಂದ ಕೈ ಪಾಳಯದ ಹೈಕಮಾಂಡ್ ಬಹುಶಃ ಖಾದರ್ ಆಸೆಯನ್ನು ಈಡೇರಿಸಬಹುದೇನೋ. ಒಂದೊಮ್ಮೆ ಯು.ಟಿ.ಖಾದರ್ ಗೆ ಸಚಿವ ಸ್ಥಾನವು ಪ್ರಾಪ್ತವಾದರೆ ಜಮೀರ್ ಅಹ್ಮದ್ ಗೆ ಮಂತ್ರಿ ಭಾಗ್ಯ ಮರೀಚಿಕೆಯಾಗಬಹುದೇನೋ. ಅದು ದಾವಣಗೆರೆ ಉಪ ಚುನಾವಣೆಯ 'ಎಫೆಕ್ಟ್' ಎಂದೂ ಕೆಲವರು ಹೇಳುವುದುಂಟು.

ಒಂದು ವೇಳೆ, ಡಿ.ಕೆ.ಶಿವಕುಮಾರ್ ಅವರು 20 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆನ್ನುವುದಾದರೆ ಮತ್ತೊಂದಷ್ಟು ಹೊಸ ಮುಖಗಳಿಗೂ ಅವಕಾಶ ಒದಗಿ ಬರಬಹುದು. ಆಗ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಮತ್ತು ವಿಧಾನಪರಿಷತ್ ಸದಸ್ಯರೂ ಆದ ಯತೀಂದ್ರ ಸಿದ್ದರಾಮಯ್ಯ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ವಿರಾಜಪೇಟೆ ಶಾಸಕ ಮತ್ತು ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರೂ ಆಗಿದ್ದ ಎ.ಎಸ್.ಪೊನ್ನಣ್ಣ ಅವರಿಗೂ ಸಚಿವ ಸ್ಥಾನ ಸಿಗಬಹುದೆಂಬ ಮಾತು ಕೇಳಿ ಬಂದಿದೆ.

ಇದೆಲ್ಲದರ ನಡುವೆ 3-4 ಬಾರಿ ಶಾಸಕರಾಗಿರುವ ಮೂವತ್ತು ಮಂದಿ ಶಾಸಕರ ಪೈಕಿ 5-6 ಮಂದಿಗೆ ಡಿಕೆ ಸಂಪುಟದಲ್ಲಿ ಜಾಗ ಮೀಸಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ, ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಉಪಮುಖ್ಯಮಂತ್ರಿ ಹುದ್ದೆಯೇ ಬೇಡವೆಂಬ ನಿರ್ಧಾರಕ್ಕೆ ಬಂದರೂ ಅಚ್ಚರಿಯಿಲ್ಲ. ಒಂದು ವೇಳೆ ಡಿಸಿಎಂ ಹುದ್ದೆ ಮುಂದುವರಿದರೆ ಸಾಮಾಜಿಕ ನ್ಯಾಯ ಪರಿಪಾಲನೆ ಆಧಾರದಲ್ಲಿ‌ ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮುಸ್ಲಿಂ ಸೇರಿದಂತೆ ನಾಲ್ವರಿಗೆ ಅವಕಾಶಗಳು ಸಿಗಲಿವೆ ಎನ್ನಲಾಗುತ್ತಿದೆ.

ಇದೆಲ್ಲವೂ ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬಂದ ಮಾತುಗಳೇ ವಿನಾ ಇದಕ್ಕೆ ಯಾವುದೇ ಆಧಾರವಿಲ್ಲ. ಆದರೆ, ನಾಳೆಯ (ಸೋಮವಾರ) ವೇಳೆಗೆ ಸಚಿವ ಸ್ಥಾನ ಮತ್ತು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಇದೇ ಜೂನ್ 18 ರಂದು ನಾಲ್ಕು ರಾಜ್ಯಸಭಾ ಸ್ಥಾನಗಳು ಮತ್ತು ಶಾಸಕರ ಕೋಟಾದಿಂದ ಏಳು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹೈಕಮಾಂಡ್ ಕೆಲವು ಸಂಪುಟ ಸ್ಥಾನಗಳನ್ನು ಖಾಲಿ ಇಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಟ್ಟಿನಲ್ಲಿ ಸಚಿವಸ್ಥಾನ ಆಕಾಂಕ್ಷಿಗಳಲ್ಲಿ ಒಂದು ರೀತಿಯ ಟೆನ್ಷನ್ ಶುರುವಾಗಿದ್ದರೆ, ಸಿಎಂ ಹುದ್ದೆಯ ಬಹುದಿನಗಳ ಆಸೆಯನ್ನು ಈಡೇರಿಸಿಕೊಳ್ಳುತ್ತಿರುವ ಡಿಕೆಶಿ ಮಾತ್ರ ಅದಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಹೈಕಮಾಂಡ್ ಹೇಳಿದವರಿಗೆ 'ಚಾನ್ಸ್' ಕೊಟ್ಟರಾಯಿತೆಂಬ ಸರಳ ಉಪಾಯವನ್ನು ಹುಡುಕಿಕೊಂಡಿದ್ದಾರೆಂದು ಡಿಕೆಶಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

-ಚೆನ್ನವೀರ ಸಗರನಾಳ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By :
PublicNext

PublicNext

31/05/2026 07:51 pm

Cinque Terre

9.57 K

Cinque Terre

0

ಸಂಬಂಧಿತ ಸುದ್ದಿ