ಉಡುಪಿ : ತಮ್ಮ ಜನಪ್ರಿಯ ಹಾಡುಗಳಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಬಹುಭಾಷಾ ಗಾಯಕಿ ಸುಮನ್ ಕಲ್ಯಾಣಪುರ್(89) ಭಾನುವಾರ ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಲೋಖಂಡವಾಲಾ ಪ್ರದೇಶದ ನಿವಾಸದಲ್ಲಿ ರಾತ್ರಿ 8ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪುತ್ರಿ ಚಾರು ಇದ್ದಾರೆ.
1960 ಮತ್ತು 1970ರ ದಶಕದಲ್ಲಿ ತಮ್ಮ ಮಧುರ ಗೀತೆಗಳಿಂದ ಮನಸೆಳೆದಿದ್ದ ಕಲ್ಯಾಣಪುರ್ ಅವರು, ಅಂದಿನ ಕಾಲದ ಮೇರುಗಾಯಕಿ ಲತಾ ಮಂಗೇಶ್ಕರ್ ಪ್ರಭಾವದ ನಡುವೆಯೂ ತಮ್ಮದೇ ಸ್ವಂತಿಕೆಯನ್ನು ರೂಪಿಸಿದ್ದರು. ಸುಮನ್ ಅವರ ಧ್ವನಿಯನ್ನು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ದನಿಗೆ ಹೋಲಿಸಲಾಗುತ್ತಿತ್ತು. ಆದರೆ, ಸಂದರ್ಶನವೊಂದರಲ್ಲಿ ಇದನ್ನು ಸುಮನ್ ನಿರಾಕರಿಸಿದ್ದರು.
ಹಿಂದಿ, ಕನ್ನಡ, ಮರಾಠಿ, ಅಸ್ಸಾಮಿ, ಬಂಗಾಳಿ, ಒಡಿಯಾ ಸೇರಿದಂತೆ ಹಲವು ಭಾಷೆಗಳಲ್ಲಿ ಭಕ್ತಿಗೀತೆ, ಗಜಲ್ ಹೀಗೆ ಹಲವು ಪ್ರಕಾರದ ಹಾಡುಗಾರಿಕೆಯಲ್ಲಿ ಹೆಸರು ಮಾಡಿದ್ದರು. ಅಂತ್ಯಸಂಸ್ಕಾರ ಸೋಮವಾರ ಮಧ್ಯಾಹ್ನ ಮುಂಬೈನ ಪವನ್ ಹನ್ಸ್ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸುಮನ್ ಅವರ ತಂದೆ ಶಂಕರರಾವ್ ಹೆಮ್ಮಾಡಿ ಅವರು ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೆಮ್ಮಾಡಿಯವರು. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಮುಂಬೈಗೆ ಸ್ಥಳಾಂತರಗೊಂಡಿದ್ದರು.
Kshetra Samachara
01/06/2026 11:10 am
LOADING...