ಶಿರಸಿ: ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಸೋಮವಾರ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ ಗಾಜಿನ ನೇತೃತ್ವದಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕ-ಶಿಕ್ಷಕರ ಮಹಾಸಭೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರೆಲ್ಲರೂ ಶಾಲೆಯಿಂದ ಜಾಥಾ ಹೊರಟರು. ಅಂಬಾಗಿರಿಯ ಕಾಳಿಕಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ವರ್ಷದ ಶಾಲಾ ಚಟುವಟಿಕೆಗಳಿಗೆ ಶುಭಾರಂಭ ಮಾಡಲಾಯಿತು.
ಈ ವೇಳೆಯಲ್ಲಿ, ಎಸ್.ಡಿ.ಎಂ.ಸಿ. ಸದಸ್ಯೆ ಶ್ವೇತಾ ನಾಯಕ ಅವರು ವಿದ್ಯಾರ್ಥಿಗಳೆಲ್ಲರಿಗೂ ಪೆನ್ ಹಾಗೂ ಸಿಹಿ ವಿತರಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸರಕಾರದಿಂದ ಉಚಿತ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಬಸವರಾಜ ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, "ಇದು ಸರಕಾರದ ಹೆಮ್ಮೆಯ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳನ್ನು ಶಾಲಾ ಶುಭಾರಂಭದ ದಿನದಂದು ಅದ್ದೂರಿಯಾಗಿ ಬರಮಾಡಿಕೊಂಡಿರುವುದು ಅವರಿಗೆ ಹರ್ಷ ತರುವುದಲ್ಲದೆ, ಕಲಿಕೆಗೆ ಇನ್ನಷ್ಟು ಪ್ರೇರಣೆ ನೀಡುತ್ತದೆ" ಎಂದು ಹೇಳಿದರು.
ಎಸ್.ಡಿ.ಎಂ.ಸಿ. ಸದಸ್ಯೆ ಶ್ವೇತಾ ನಾಯಕ ಅವರು ಪೋಷಕರಿಗೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಕರೆ ನೀಡಿದರು.
ನೂತನವಾಗಿ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ ಗಾಜಿನ, ಸದಸ್ಯರಾದ ಸಂದೀಪ ಶೇಟ್, ಶ್ವೇತಾ ನಾಯಕ, ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕಿ ರಾಜೇಶ್ವರಿ ಹೆಗಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರೆ, ಶಿಕ್ಷಕ ದೀಪಕ ಗೋಕರ್ಣ ಸಭೆಯನ್ನು ನಿರ್ವಹಿಸಿ ವಂದನಾರ್ಪಣೆ ಮಾಡಿದರು.
Kshetra Samachara
01/06/2026 04:42 pm