ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ಉರ್ದು ಶಾಲೆಯ ತಡೆಗೋಡೆ ನಿರ್ಮಾಣಕ್ಕೆ ಬಿಜೆಪಿ ವಿರೋಧ - ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಭರವಸೆ

ಸಿದ್ದಾಪುರ: ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಉರ್ದು ಶಾಲೆಯ ಕಟ್ಟಡದ ಒಂದು ಬದಿಯಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡಿದ್ದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಬಿಜೆಪಿ ಮಂಡಲದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ತಹಶೀಲ್ದಾರ್ ಅವರು ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಭರವಸೆ ನೀಡಿದ್ದಾರೆ. ತಹಶೀಲ್ದಾರ್ ಭರವಸೆಯೊಂದಿಗೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಬಿಜೆಪಿ ಪ್ರತಿಭಟನೆ ಸಫಲವಾಗಿದೆ.

ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಉರ್ದು ಶಾಲಾ ಕಟ್ಟಡವು ಅಭದ್ರವಾಗಿದ್ದು, ಕಳೆದ ಎರಡು ವರ್ಷಗಳಿಂದ ತರಗತಿಗಳನ್ನು ಬೇರೆಡೆ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಲಾಯಿತು. ಸದ್ಯ ಈ ಜಾಗದಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಭದ್ರ ಕಟ್ಟಡದ ಪಕ್ಕದಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪ್ರತಿಭಟನಕಾರರು ವಾದಿಸಿದರು.

ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂದು ಒತ್ತಾಯಿಸಿದ ಬಿಜೆಪಿ ಮುಖಂಡರು, ಆ ಜಾಗವನ್ನು ಸಿದ್ದಾಪುರ ಸಂತೆ ಮಾರುಕಟ್ಟೆಯನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಈಗಾಗಲೇ ಶಾಲೆ ನಡೆಯದ ಕಾರಣ, ಅದೇ ಜಾಗದಲ್ಲಿ ಶಾಲೆಯನ್ನು ಮರುಪ್ರಾರಂಭಿಸುವ ಅವಶ್ಯಕತೆ ಇಲ್ಲ. ಬದಲಾಗಿ, ಈ ಹಿಂದೆ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೇರೆ ಕಡೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಉತ್ತಮ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ತಡೆಗೋಡೆ ನಿರ್ಮಿಸಿ, ಅಭದ್ರ ಶಾಲೆಯನ್ನು ಪುನರಾರಂಭಿಸಿ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತಂದರೆ, ಅದಕ್ಕೆ ಶಾಸಕರು, ತಹಸೀಲ್ದಾರರು ಮತ್ತು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ ಎಂದು ಪ್ರತಿಭಟನಕಾರರು ಗಂಭೀರ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ನಂದನ್ ಬೋಕರ್, ಪ.ಪಂ. ಮಾಜಿ ಸದಸ್ಯ ಮಾರುತಿ ನಾಯ್ಕ್ ಹೊಸೂರು ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಭಟ್ ಸ್ವಾಗತ ಭಾಷಣ ಮಾಡಿದರು ಹಾಗೂ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಐಸೂರು ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
PublicNext

PublicNext

27/05/2026 04:10 pm

Cinque Terre

4.65 K

Cinque Terre

0

ಸಂಬಂಧಿತ ಸುದ್ದಿ