ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿ, ಯುವ ಪೀಳಿಗೆಯ (Gen Z) ಧ್ವನಿಯಾಗಿ ಹೊರಹೊಮ್ಮಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP), ಜೂನ್ 6 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಈ ಪ್ರತಿಭಟನೆಯ ಸಿದ್ಧತೆ ಹಾಗೂ ತಮ್ಮ ಮುಂದಿನ ಕಾರ್ಯತಂತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳಲು ಬುಧವಾರ ಸಂಜೆ 5:15 ಕ್ಕೆ ದೆಹಲಿಯ 'ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ'ದಲ್ಲಿ ಪಕ್ಷವು ತುರ್ತು ಪತ್ರಿಕಾಗೋಷ್ಠಿ ಕರೆದಿದೆ.
ಪಕ್ಷದ ಮುಖ್ಯ ವಕ್ತಾರರಾದ ಸೌರವ್ ದಾಸ್, ವಿಜೇತಾ ದಹಿಯಾ ಮತ್ತು ಅಶುತೋಷ್ ರಾಂಕಾ ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದು, ಪ್ರತಿಭಟನೆಯ ಸಂಪೂರ್ಣ ನೀಲನಕಾಶೆಯನ್ನು ಬಿಡುಗಡೆ ಮಾಡಲಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ನಿರುದ್ಯೋಗಿ ಯುವಕರನ್ನು ಪರೋಕ್ಷವಾಗಿ ‘ಜಿರಳೆಗಳು’ (Cockroaches) ಎಂದು ಕರೆದಿದ್ದಾರೆ ಎಂದು ಭಾವಿಸಿ ಯುವ ಸಮೂಹ ಆಕ್ರೋಶ ಹೊರಹಾಕಿತ್ತು. ಇದರ ಬೆನ್ನಲ್ಲೇ ಯುವಕರು ವ್ಯಂಗ್ಯಾತ್ಮಕವಾಗಿ (Satirical) ಈ 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು ಹುಟ್ಟುಹಾಕಿದರು. ಕೇವಲ ಮೀಮ್ಸ್ ಹಾಗೂ ಆನ್‌ಲೈನ್ ಅಭಿಯಾನಕ್ಕೆ ಸೀಮಿತವಾಗಿದ್ದ ಈ ಗುಂಪು, ಇಂದು ದೇಶದ ನಿರುದ್ಯೋಗ, ಶಿಕ್ಷಣ ವ್ಯವಸ್ಥೆಯ ಲೋಪದೋಷಗಳು ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಡುವ ಬೃಹತ್ ಯುವ ಚಳವಳಿಯಾಗಿ ರೂಪಾಂತರಗೊಂಡಿದೆ.
ಪ್ರಸ್ತುತ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಸಿಜೆಪಿ (CJP) ತನ್ನ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ಆರೋಪಿಸಿರುವ ಯುವ ನಾಯಕರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
* ಪರೀಕ್ಷಾ ಮಂಡಳಿಗಳ ನಿರಂತರ ಎಡವಟ್ಟುಗಳಿಂದಾಗಿ ಭಾರತದ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲಿನ ನಂಬಿಕೆಯೇ ಹೊರಟುಹೋಗಿದೆ ಎಂದು ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಜಂತರ್ ಮಂತರ್ ಪ್ರತಿಭಟನೆಗಾಗಿ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಅಮೆರಿಕದಿಂದ ಭಾರತಕ್ಕೆ ಮರಳುತ್ತಿದ್ದಾರೆ. ಇವರ ಹೋರಾಟಕ್ಕೆ ದೇಶದ ಖ್ಯಾತ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಬಹಿರಂಗ ಬೆಂಬಲ ಘೋಷಿಸಿದ್ದು, ಜೂನ್ 6 ರಂದು ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು, ಯುವ ವೃತ್ತಿಪರರು ದೆಹಲಿಗೆ ಲಗ್ಗೆ ಇಡುವ ಸಾಧ್ಯತೆ ಇದೆ.
ಜಿರಳೆಗಳು ಸಾಯುವುದಿಲ್ಲ! ಆನ್‌ಲೈನ್‌ನಲ್ಲಿ ಹತ್ತಿಕ್ಕಲು ನೋಡಿದರೂ 'ಕಾಕ್ರೋಚಸ್ ನೆವರ್ ಡೈ' (ಜಿರಳೆಗಳು ಎಂದಿಗೂ ಸಾಯುವುದಿಲ್ಲ) ಎಂಬ ಟ್ಯಾಗ್‌ಲೈನ್ ಮೂಲಕ ಬೀದಿಗಿಳಿದಿರುವ ಈ ಡಿಜಿಟಲ್ ಆರ್ಮಿ, ಜೂನ್ 6 ರಂದು ರಾಜಧಾನಿಯಲ್ಲಿ ಹಮ್ಮಿಕೊಂಡಿರುವ ಈ ಆಫ್‌ಲೈನ್ ಪ್ರತಿಭಟನೆ ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
PublicNext
03/06/2026 04:21 pm