ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾರ್ವೆ ಚೆಸ್ : ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಪ್ರಜ್ಞಾನಂದಗೆ ಐತಿಹಾಸಿಕ ಜಯ

ನಾರ್ವೆ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು 'ನಾರ್ವೆ ಚೆಸ್' ಟೂರ್ನಿಯಲ್ಲಿ ಜಗತ್ತೇ ಬೆರಗಾಗುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೂರ್ನಿಯ 8ನೇ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡನೇ ಬಾರಿಗೆ ಮಣಿಸುವ ಮೂಲಕ ಪ್ರಜ್ಞಾನಂದ ಇತಿಹಾಸ ಬರೆದಿದ್ದಾರೆ.

ಈ ಗೆಲುವಿನೊಂದಿಗೆ, ಒಂದೇ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಸೋಲಿಸಿದ ವಿಶ್ವದ ಅತ್ಯಪರೂಪದ ಆಟಗಾರರ ಸಾಲಿಗೆ ಚೆನ್ನೈನ ಈ 20 ವರ್ಷದ ಯುವ ಪ್ರತಿಭೆ ಸೇರ್ಪಡೆಯಾಗಿದ್ದಾರೆ. ಕಳೆದ ಮೇ 27ರಂದು ನಡೆದ 3ನೇ ಸುತ್ತಿನಲ್ಲಿ ಬಿಳಿ ದಾಳಗಳೊಂದಿಗೆ ಕಾರ್ಲ್‌ಸನ್‌ಗೆ ಆಘಾತ ನೀಡಿದ್ದ ಪ್ರಜ್ಞಾನಂದ, ಇದೀಗ 8ನೇ ಸುತ್ತಿನಲ್ಲಿ ಕಪ್ಪು ದಾಳಗಳೊಂದಿಗೆ ಆಡಿಯೂ ಜಯಭೇರಿ ಬಾರಿಸುವ ಮೂಲಕ ತಮ್ಮ ಅಸಾಧಾರಣ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಗಮನಾರ್ಹವೆಂದರೆ, 2024ರ ನಾರ್ವೆ ಚೆಸ್ ಆವೃತ್ತಿಯಲ್ಲೂ ಪ್ರಜ್ಞಾನಂದ ಕಾರ್ಲ್‌ಸನ್ ವಿರುದ್ಧ ಜಯ ಗಳಿಸಿದ್ದರು.

ಕ್ಲಾಸಿಕಲ್ ಚೆಸ್ ಇತಿಹಾಸದಲ್ಲಿ ಕಳೆದ 19 ವರ್ಷಗಳಲ್ಲಿ ಯಾವುದೇ ಆಟಗಾರ ಒಂದೇ ಟೂರ್ನಿಯಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಸೋಲಿಸಲು ಸಾಧ್ಯವಾಗಿರಲಿಲ್ಲ. ಪ್ರಜ್ಞಾನಂದ ಈಗ ಈ ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ. ಈ ಹಿಂದೆ, 2007ರ 'ಲಿನಾರೆಸ್ ಇಂಟರ್ನ್ಯಾಷನಲ್ ಚೆಸ್' ಟೂರ್ನಿಯಲ್ಲಿ ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ಅವರು ಕಾರ್ಲ್‌ಸನ್ ಅವರನ್ನು ಎರಡು ಬಾರಿ ಸೋಲಿಸಿದ್ದರು. ಆನಂದ್ ಅವರ 19 ವರ್ಷಗಳ ಹಳೆಯ ಈ ದಾಖಲೆಯನ್ನು ಪ್ರಜ್ಞಾನಂದ ಇದೀಗ ಸರಿಗಟ್ಟಿದ್ದಾರೆ.

ಇಂತಹ ಐತಿಹಾಸಿಕ ಗೆಲುವು ಸಾಧಿಸಿದ್ದರೂ, ಯುವ ಆಟಗಾರ ಪ್ರಜ್ಞಾನಂದ ತಮಗೆ ಸಿಗುತ್ತಿರುವ ಅತಿಯಾದ ಪ್ರಶಂಸೆ ಮತ್ತು ಪ್ರಚಾರದಿಂದ ದೂರ ಉಳಿದಿದ್ದಾರೆ. ಪಂದ್ಯದ ಬಳಿಕ 'ಚೆಸ್ ಬೇಸ್ ಇಂಡಿಯಾ' ಜೊತೆ ಮಾತನಾಡಿದ ಅವರು, "ಮ್ಯಾಗ್ನಸ್ ಕಾರ್ಲ್‌ಸನ್ ಅವರಂತಹ ದಿಗ್ಗಜನನ್ನು ಸೋಲಿಸುವುದಕ್ಕಿಂತ, ಟೂರ್ನಿಯ ಈ ಹಂತದಲ್ಲಿ ಪಂದ್ಯವನ್ನು ಗೆಲ್ಲುವುದು ನನಗೆ ತುಂಬಾ ಮುಖ್ಯವಾಗಿತ್ತು. ಈ ಗೆಲುವು ಸಾಧಿಸಿದ್ದಕ್ಕೆ ನನಗೆ ಖುಷಿಯಿದೆ" ಎಂದು ಅತ್ಯಂತ ವಿನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾರ್ಲ್‌ಸನ್ ಅವರ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಜ್ಞಾನಂದ, "ಅವರು ಅತ್ಯುತ್ತಮವಾಗಿ ಡಿಫೆಂಡ್ ಮಾಡುತ್ತಿದ್ದರು. ಬೇರೆ ಯಾವುದೇ ಆಟಗಾರನಾಗಿದ್ದರೆ ಒತ್ತಡದ ಸಮಯದಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಿದ್ದರು. ಆದರೆ ಕಾರ್ಲ್‌ಸನ್ ನಿಖರವಾದ ನಡೆಗಳನ್ನೇ ಇಡುತ್ತಿದ್ದರು. ಪಂದ್ಯ ಡ್ರಾ ಆಗಲಿದೆ ಎಂದೇ ನಾನು ಭಾವಿಸಿದ್ದೆ. ಆದರೆ ಕೊನೆಯಲ್ಲಿ ಅವರು ಅನಿರೀಕ್ಷಿತವಾಗಿ ದೊಡ್ಡ ತಪ್ಪು (Blunder) ಎಸಗಿದರು" ಎಂದು ಪಂದ್ಯದ ರೋಚಕ ಕ್ಷಣಗಳನ್ನು ವಿವರಿಸಿದ್ದಾರೆ.

ಸದ್ಯ ಪ್ರಜ್ಞಾನಂದ 12 ಅಂಕಗಳೊಂದಿಗೆ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ವೆಸ್ಲಿ ಸೋ (14 ಅಂಕ) ಮೊದಲ ಸ್ಥಾನದಲ್ಲಿದ್ದರೆ, ಅಲಿರೆಜಾ ಫಿರೌಜ್ಜಾ (13 ಅಂಕ) ಎರಡನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ ಇನ್ನು ಕೇವಲ ಎರಡು ಸುತ್ತುಗಳು ಬಾಕಿ ಉಳಿದಿದ್ದು, ಮುಂದಿನ ಪಂದ್ಯದಲ್ಲಿ ಪ್ರಜ್ಞಾನಂದ ಅವರು ಸದ್ಯದ ವಿಶ್ವ ಚಾಂಪಿಯನ್ ಡಿ. ಗುಕೇಶ್ ವಿರುದ್ಧ ಹಾಗೂ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಸೆಣಸಲಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಭಾರತದ ಈ ಯುವ ತಾರೆ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿದ್ದಾರೆ.

Edited By : Nirmala Aralikatti
PublicNext

PublicNext

03/06/2026 04:29 pm

Cinque Terre

5.21 K

Cinque Terre

0

ಸಂಬಂಧಿತ ಸುದ್ದಿ