ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರೈಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ‘ಪಂಚಮುಖಿ’ ಜೂನ್ 26 ರಂದು ಬಿಡುಗಡೆ!

ಬೆಂಗಳೂರು: ಎಸ್.ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಚಂದ್ರು ಆಚಾರ್ ಅವರ ಚೊಚ್ಚಲ ನಿರ್ದೇಶನದ ‘ಪಂಚಮುಖಿ’ ಚಿತ್ರದ ಟ್ರೈಲರ್ ಹಾಗೂ ವಿಡಿಯೋ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆಯುತ್ತಿವೆ. ಎಲ್ಲಾ ಸಿದ್ಧತೆಗಳನ್ನು ಮುಗಿಸಿಕೊಂಡಿರುವ ಈ ಚಿತ್ರವು ಇದೇ ಜೂನ್ 26 ರಂದು ರಾಜ್ಯಾದ್ಯಂತ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡವು ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.

ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿರುವ ಚಂದ್ರು ಆಚಾರ್ ಮಾತನಾಡಿ, ಕೆಲವು ಸಿನಿಮಾಗಳಿಗೆ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ನನಗಿದೆ, ಆದರೆ ಸ್ವತಂತ್ರ ನಿರ್ದೇಶಕನಾಗಿ ಇದು ನನ್ನ ಮೊದಲ ಚಿತ್ರ ಎಂದರು. ಇದು ಪಕ್ಕಾ ಹಾರಾರ್ ಕಥಾಹಂದರ ಹೊಂದಿದ್ದರೂ, ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಕಮರ್ಷಿಯಲ್ ಮನರಂಜನೆಯ ಅಂಶಗಳು ಚಿತ್ರದಲ್ಲಿವೆ. ಸ್ಪೂರ್ತಿ ಮನೋಹರ್ ಈ ಚಿತ್ರದ ನಾಯಕಿಯಾಗಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಚಾಲನೆ ಸಿಕ್ಕಿದ್ದ ಈ ಸಿನಿಮಾ, ಕಾರಣಾಂತರಗಳಿಂದ ಬಿಡುಗಡೆ ತಡವಾಗಿದೆ ಎಂದು ಮಾಹಿತಿ ನೀಡಿದರು.

ಇದು ಮಿತ ಬಜೆಟ್‌ನ ಚಿತ್ರವಾಗಿದ್ದರೂ ತಂತ್ರಜ್ಞರ ಹಾಗೂ ಕಲಾವಿದರ ಶ್ರಮ ದೊಡ್ಡದಿದೆ. ಚಿತ್ರದ ಬಹುತೇಕ ತಂತ್ರಜ್ಞರು ಮತ್ತು ಕಲಾವಿದರು ಯಾವುದೇ ಸಂಭಾವನೆ ಪಡೆಯದೇ ಈ ಚಿತ್ರಕ್ಕಾಗಿ ಕೆಲಸ ಮಾಡಿರುವುದು ವಿಶೇಷವಾಗಿದ್ದು, ಅವರೆಲ್ಲರ ಸಹಕಾರದಿಂದಲೇ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದು ಚಂದ್ರು ಆಚಾರ್ ಧನ್ಯವಾದ ತಿಳಿಸಿದರು.ಚಿತ್ರದಲ್ಲಿ ಅರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿರುವ 4 ಹಾಡುಗಳಿದ್ದು, ಪ್ರವೀಣ್ ಪೂಜಾರಿ ನಾಡ ಅವರ ಛಾಯಾಗ್ರಹಣ ಹಾಗೂ ಅರವಿಂದ್ ಮಲ್ಲು ಅವರ ಸಂಕಲನ ಚಿತ್ರದ ಕಥೆಗೆ ಪೂರಕವಾಗಿ ಮೂಡಿಬಂದಿದೆ.

ನಾಯಕಿ ಸ್ಪೂರ್ತಿ ಮನೋಹರ್ ಮಾತನಾಡಿ, ಇದು ನನ್ನ ಮೊದಲ ಚಿತ್ರವಾಗಿದ್ದು, ಕಥೆ ತುಂಬಾ ವಿಶಿಷ್ಟವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಅರೋನ್ ಕಾರ್ತಿಕ್ ವೆಂಕಟೇಶ್, ಸಂಕಲನಕಾರ ಅರವಿಂದ್ ಜೆ.ಪಿ ಮಲ್ಲು, ಕಲಾವಿದರಾದ ಪವನ್, ತೇಜಸ್, ಪೃಥ್ವಿ ಹಾಗೂ ಚಿತ್ರದ ವಿತರಕರಾದ ರಾಜು ಅವರು ಉಪಸ್ಥಿತರಿದ್ದು, ಜೂನ್ 26 ರಂದು ತೆರೆಕಾಣಲಿರುವ ಈ ಚಿತ್ರಕ್ಕೆ ಸಿನಿರಸಿಕರ ಪ್ರೋತ್ಸಾಹದ ಅಗತ್ಯವಿದೆ ಎಂದು ಚಿತ್ರತಂಡ ಮನವಿ ಮಾಡಿದೆ.

Edited By : Vijay Kumar
PublicNext

PublicNext

05/06/2026 01:27 pm

Cinque Terre

7.64 K

Cinque Terre

0