ಮಡಿಕೇರಿ:ಕರ್ನಾಟಕ ರಾಜ್ಯ ಸರ್ಕಾರ ಬಡವರ ಪರವಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಗೌರವಯುತವಾಗಿ ಬಾಳ್ವೆ ನಡೆಸಲು ಬೇಕಾದ ಎಲ್ಲಾ ಸವಲತ್ತುಗಳನ್ನು ಆದ್ಯತೆ ಮೇರೆಗೆ ಒದಗಿಸುತ್ತಾ ಬಂದಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲ್ಲೂಕು 18 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಆಯ್ಕೆ ಆಗಿರುವ ಅರ್ಹ ಫಲಾನುಭವಿಗಳಿಗೆ ನೂತನ ಮನೆ ನಿರ್ಮಾಣ ಕಾಮಗಾರಿ ಆದೇಶ ಪ್ರತಿ ವಿತರಣಾ ಕಾರ್ಯಕ್ರಮದಲ್ಲಿ ಸುಮಾರು 400 ಕ್ಕೂ ಅಧಿಕ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದರು. ನಿವೇಶನ ಮತ್ತು ವಸತಿ ರಹಿತರಿಗೆ ವಸತಿ ನೀಡುವುದು ಸರ್ಕಾರದ ಕರ್ತವ್ಯ. ಹಲವು ವರ್ಷಗಳಿಂದ ಸರ್ಕಾರದಿಂದ ಮನೆ ನಿರ್ಮಿಸಬೇಕು, ನಿವೇಶನ ರಹಿತರು, ವಸತಿ ರಹಿತರಿಗೆ ಆದ್ಯತೆ ಮೇರೆಗೆ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಹಲವಾರು ಜನಪರ ಯೋಜನೆಗಳೊಂದಿಗೆ ವಸತಿ ನೀಡುವ ಯೋಜನೆಗೂ ಮಹತ್ವ ನೀಡಿದೆ ಎಂದು ಶಾಸಕರು ಹೇಳಿದರು.
ಅಂದಿನ ವಸತಿ ಸಚಿವರಾದ ಜಮೀರ್ ಅಹಮ್ಮದ್ ಅವರು ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿ ವಸತಿ ಸೌಲಭ್ಯ ಒದಗಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಸಂಪುಟಗಳ ಸದಸ್ಯರ ಸಹಕಾರದಿಂದ ಜಿಲ್ಲೆಗೆ ಮನೆ ನಿರ್ಮಾಣಕ್ಕೆ ಅನುದಾನ ದೊರೆತಿದೆ ಎಂದು ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು.
ಮಳೆಗಾಲ ಪ್ರಾರಂಭಕ್ಕೂ ಮೊದಲು ಮನೆ ಹಸ್ತಾಂತರ ಮಾಡುವ ಯೋಜನೆ ಇದ್ದು, ಇದರ ಸದುಪಯೋಗ ಜನರು ಪಡೆದುಕೊಂಡು, ತಮ್ಮ ಅನುಕೂಲಕ್ಕನುಸಾರ ಮನೆ ನಿರ್ಮಿಸಿ ಉತ್ತಮ ಜೀವನ ನಡೆಸುವಂತಾಗಲಿ ಎಂದು ಶಾಸಕರು ಶುಭ ಹಾರೈಸಿದರು.
PublicNext
07/06/2026 07:22 am