ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ ಗಾಜಿನ ಸೇತುವೆ ಪರಿಶೀಲನೆ : ಪ್ರವಾಸಿಗರ ಸುರಕ್ಷತೆ ಗಮನಹರಿಸಿ ಮುಂದಿನ ಕ್ರಮ - ಸೋಮಶೇಖರ್

ಮಡಿಕೇರಿ :ತಾಲ್ಲೂಕಿನ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿ ಮತ್ತು ಉಡೋತ್‍ಮೊಟ್ಟೆ ಬಳಿಯ ಗಾಜಿನ ಸೇತುವೆ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

ಮೊದಲಿಗೆ ಅಬ್ಬಿ ಜಲಪಾತ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಮಾರ್ಗದ ಜಂಕ್ಷನ್ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಗಾಜಿನ ಸೇತುವೆ ನಿರ್ಮಾಣ ಮಾಡಿರುವ ಜಾಗ, ಗಾಜಿನ ಸೇತುವೆ ನಿರ್ಮಾಣ ಮಾಡಲು ಅನುಮತಿ ಪಡೆಯಲಾಗಿದೆಯೇ, ನಿರ್ಮಾಣ ಸಂದರ್ಭದಲ್ಲಿ ಎಂಜಿನಿಯರ್‍ಗಳ ದೃಢೀಕರಣ ಪತ್ರ, ಹಾಗೆಯೇ ಪ್ರವಾಸಿಗರ ಅನುಕೂಲಕ್ಕಾಗಿ ವಾಹನ ನಿಲುಗಡೆಗೆ ಸ್ಥಳಾವಕಾಶ, ಪ್ರವಾಸಿಗರ ವೀಕ್ಷಣೆಗೆ ಎಷ್ಟು ಕಾಲಾವಕಾಶ ಮತ್ತು ಪ್ರವಾಸಿಗರಿಗೆ ನಿಗದಿ ಮಾಡಿರುವ ಶುಲ್ಕ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.

ಬಳಿಕ ಉಡೋತ್‍ಮೊಟ್ಟೆ ಬಳಿಯ ಗಾಜಿನ ಸೇತುವೆ ವೀಕ್ಷಿಸಿದ ಜಿಲ್ಲಾಧಿಕಾರಿ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು. ವಾಹನ ನಿಲುಗಡೆಗೆ ಜಾಗ ಇಲ್ಲದಿರುವುದರಿಂದ ಸಾಮಾನ್ಯವಾಗಿ ಓಡಾಡುವ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಗಮನಹರಿಸಬೇಕು. ಪ್ರವಾಸೋದ್ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

‘ಮಳೆಗಾಲದಲ್ಲಿ ಮುನ್ನೆಚ್ಚರ ವಹಿಸುವ ಸಂಬಂಧ ಈ ಎರಡು ಗಾಜಿನ ಸೇತುವೆ ವೀಕ್ಷಣೆಗೆ ಈ ಹಿಂದೆ ನಿರ್ಬಂಧ ಹೇರಲಾಗಿತ್ತು, ಈ ಬಗ್ಗೆ ಮರುಪರಿಶೀಲಿಸಿ, ಪ್ರವಾಸಿಗರು ಮತ್ತು ಎಲ್ಲರ ಹಿತಾಸಕ್ತಿ ಕಾಪಾಡುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.’

ಅಬ್ಬಿಪಾಲ್ಸ್ ಮತ್ತು ಮಾಂದಲ್ ಪಟ್ಟಿಗೆ ತೆರಳುವ ಜಂಕ್ಷನ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಾಂದಲ್ ಪಟ್ಟಿಗೆ ತೆರಳುವ ಜೀಪುಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿ ಪ್ರವಾಸಿಗರಿಂದ ಬಾಡಿಗೆ ದರ ಎಷ್ಟು ಪಡೆಯಲಾಗುತ್ತಿದೆ. ವಾಹನ ಮತ್ತು ಚಾಲಕರಿಗೆ ಪರವಾನಗಿ ಇದೆಯೇ ಎಂದು ಮತ್ತಿತರ ಬಗ್ಗೆ ಚಾಲಕರಿಂದ ಮಾಹಿತಿ ಪಡೆದರು.

ಸುರಕ್ಷತೆಗೆ ಒತ್ತು ನೀಡಬೇಕು. ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡಬಾರದು. ದೂರುಗಳು ಬರದಂತೆ ಎಚ್ಚರವಹಿಸಬೇಕು ಎಂದು ನಿರ್ದೇಶನ ನೀಡಿದರು.

ಬಳಿಕ ಕಡಗದಾಳು ಬಳಿ ರೆಸಾರ್ಟ್ ಒಂದಕ್ಕೆ ಅನುಮತಿ ನೀಡುವ ಸಂಬಂಧ ಹೋಂ ಸ್ಟೇಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

Edited By : PublicNext Desk
Kshetra Samachara

Kshetra Samachara

19/06/2026 06:58 am

Cinque Terre

280

Cinque Terre

0

ಸಂಬಂಧಿತ ಸುದ್ದಿ