ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಗಾಲಕ್ಕೆ ಕೊಡಗು ಸಿದ್ಧ: ಪ್ರವಾಹ ಎದುರಿಸಲು ಎನ್‌ಡಿಆರ್‌ಎಫ್ 'ಭದ್ರಕವಚ', ಡಿಸಿ ಭರವಸೆ!

ಕೊಡಗು: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಂಪೂರ್ಣ ಸನ್ನದ್ಧವಾಗಿದೆ.

ಪ್ರತೀ ವರ್ಷದಂತೆ ಈ ಬಾರಿಯೂ ಕೊಡಗು ಜಿಲ್ಲೆಗೆ ಆಗಮಿಸಿರುವ ಎನ್‌ಡಿಆರ್‌ಎಫ್ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಡಿಕೇರಿ ನಗರದ ಜಿಲ್ಲಾ ಸಹಕಾರ ತರಬೇತಿ ಸಂಸ್ಥೆಯ ವಸತಿ ನಿಲಯದಲ್ಲಿ ಭೇಟಿ ಮಾಡಿ, ಜಿಲ್ಲೆಯ ಸೂಕ್ಷ್ಮ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಮಾಹಿತಿ ಪಡೆದರು. ತುರ್ತು ಸಂದರ್ಭಗಳಲ್ಲಿ ಜನ-ಜಾನುವಾರುಗಳ ರಕ್ಷಣೆಯಲ್ಲಿ ತಂಡದ ಪಾತ್ರದ ಬಗ್ಗೆಯೂ ಚರ್ಚಿಸಲಾಯಿತು.

ಎನ್‌ಡಿಆರ್‌ಎಫ್ ತಂಡದ ವಿವರ

ಬೆಂಗಳೂರಿನ ರೀಜನಲ್ ರೆಸ್ಪಾನ್ಸ್ ಸೆಂಟರ್ (ಆರ್‌ಆರ್‌ಸಿ) ನ 10ನೇ ಬೆಟಾಲಿಯನ್‌ಗೆ ಸೇರಿದ 30 ಮಂದಿ ಸಿಬ್ಬಂದಿಗಳ ತಂಡ ಇನ್ಸ್‌ಪೆಕ್ಟರ್ ರಾಮ್ ಭಜ್ ನೇತೃತ್ವದಲ್ಲಿ ಕೊಡಗು ಜಿಲ್ಲೆಗೆ ಆಗಮಿಸಿದೆ. ಈ ತಂಡದಲ್ಲಿ ವಿವಿಧ ರಾಜ್ಯಗಳ ಪರಿಣತ ಸಿಬ್ಬಂದಿಗಳಿದ್ದು, ಪ್ರವಾಹ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಂಪೂರ್ಣ ಸಿದ್ಧವಾಗಿದೆ. ಬೋಟ್‌ಗಳು, ಮರ ಕತ್ತರಿಸುವ ಯಂತ್ರಗಳು, ರಾಫ್ಟ್‌ಗಳು, ಹಗ್ಗಗಳು, ಟೆಂಟ್‌ಗಳು, ಜೀವ ರಕ್ಷಕ ಜಾಕೆಟ್‌ಗಳು, ಸರ್ಚ್‌ಲೈಟ್‌ಗಳು, ಆಮ್ಲಜನಕ ಜನರೇಟರ್‌ಗಳು ಹಾಗೂ ಜೀವ ರಕ್ಷಕ ಔಷಧಿಗಳ ಸಿಗ್ನಲ್ ಯೂನಿಟ್‌ಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ಪರಿಕರಗಳೊಂದಿಗೆ ತಂಡ ಸುಸಜ್ಜಿತವಾಗಿದೆ.

ವಿಶೇಷ ಶ್ವಾನದಳ ಮತ್ತು ಹಿಂದಿನ ಅನುಭವ

ಈ ಬಾರಿಯ ತಂಡದೊಂದಿಗೆ ಒಂದು ವಿಶೇಷ ಶ್ವಾನವೂ ಆಗಮಿಸಿದೆ. ಅತಿವೃಷ್ಟಿಯಿಂದ ಯಾವುದೇ ಅವಘಡಗಳು ಸಂಭವಿಸಿದರೆ, ಸಿಲುಕಿರುವವರನ್ನು ಪತ್ತೆ ಹಚ್ಚಲು ಈ ಶ್ವಾನ ಸಹಾಯಕವಾಗಲಿದೆ. ಈಗಾಗಲೇ ಆಗಮಿಸಿರುವ 10ನೇ ಬೆಟಾಲಿಯನ್ ತಂಡವು ಈ ಹಿಂದೆ ಕೇರಳದ ವಯನಾಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಯಶಸ್ವಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ ಅನುಭವ ಹೊಂದಿದೆ.

ಜಿಲ್ಲಾಧಿಕಾರಿಗಳ ಭರವಸೆ

ಜಿಲ್ಲಾ ಸಹಕಾರ ತರಬೇತಿ ಸಂಸ್ಥೆಯ ವಸತಿ ನಿಲಯದಲ್ಲಿ ಎನ್‌ಡಿಆರ್‌ಎಫ್ ತಂಡ ವಾಸ್ತವ್ಯ ಹೂಡಿದ್ದು, ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿರುವುದರಿಂದ ತಂಡದ ಉಪಸ್ಥಿತಿ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದರು.

"ಹೆಚ್ಚಿನ ಮಳೆಯಿಂದ ಯಾವುದೇ ಅವಘಡಗಳು ಸಂಭವಿಸಿದಲ್ಲಿ, ಎನ್‌ಡಿಆರ್‌ಎಫ್ ತಂಡ ತುರ್ತಾಗಿ ಧಾವಿಸಿ, ಜನ-ಜಾನುವಾರುಗಳ ರಕ್ಷಣಾ ಕಾರ್ಯಾಚರಣೆಯನ್ನು ಸಮರ್ಥವಾಗಿ ಕೈಗೊಳ್ಳಲು ಸಿದ್ಧವಾಗಿದೆ" ಎಂದು ಅವರು ಭರವಸೆ ನೀಡಿದರು.

Edited By : Somashekar
PublicNext

PublicNext

11/06/2026 10:55 am

Cinque Terre

5.81 K

Cinque Terre

0

ಸಂಬಂಧಿತ ಸುದ್ದಿ