ಮಡಿಕೇರಿ: ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಸಲಹೆ ನೀಡಿದ್ದಾರೆ. **ಭವ್ಯ ಭವಿಷ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಡುಗೊರೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಆಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕೊಡಗು, ವಕೀಲರ ಸಂಘ ಮಡಿಕೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಉದ್ದಿಮೆದಾರರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ "ಪ್ರಕೃತಿಯಿಂದ ಸ್ಫೂರ್ತಿ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ" ಎಂಬ ಧ್ಯೇಯವಾಕ್ಯದೊಂದಿಗೆ ಶುಕ್ರವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಿಮ್ನಾಸ್ಟಿಕ್ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನ್ಯಾಯಧೀಶರು ಮಾತನಾಡಿದರು.
ಪ್ರತಿದಿನವೂ ಪರಿಸರ ಕಾಳಜಿ ಅಗತ್ಯ
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಧೀಶರು, ಕವಿ ಪಂಜೆ ಮಂಗೇಶರಾಯರು ರಚಿಸಿರುವ "ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ..." ಎಂಬ ಹಾಡನ್ನು ಹಾಡಿದರು. ಕೊಡಗು ಪ್ರಾಕೃತಿಕವಾಗಿ ಸೌಂದರ್ಯವನ್ನು ಹೊಂದಿದ್ದು, ಅದನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಪರಿಸರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಪ್ರತಿದಿನವೂ ಪರಿಸರ ಕಾಳಜಿ ತೋರಬೇಕು. ನಮ್ಮ ದಿನನಿತ್ಯದ ಜೀವನದಲ್ಲಿ ಪರಿಸರ ಸಂರಕ್ಷಣೆಗಾಗಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕು ಎಂದು ನ್ಯಾಯಧೀಶರು ಕರೆ ನೀಡಿದರು.
Kshetra Samachara
05/06/2026 07:05 pm