ಮಡಿಕೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಶುಕ್ರವಾರ ಸಭೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯನ್ನು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಪೂರ್ಣಗೊಳಿಸಲು ಪಕ್ಷದ ಮುಖಂಡರುಗಳು ಸಹಕಾರ ನೀಡುವಂತೆ ಕೋರಿದರು.
ಭಾರತ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆಗೆ ಅರ್ಹತಾ ದಿನಾಂಕ 2026 ಅಕ್ಟೋಬರ್ 1 ನ್ನು ಘೋಷಿಸಿದ್ದು, ಜೂ.20 ರಿಂದ 29ರ ವರೆಗೆ ಪೂರ್ವತಯಾರಿ, ತರಬೇತಿ ಮತ್ತು ಮುದ್ರಣಕ್ಕೆ ಅವಕಾಶ ಕಲ್ಪಿಸಿದೆ. ಜೂ.30 ರಿಂದ ಜು.29ರ ವರೆಗೆ ಮತಗಟ್ಟೆ ಅಧಿಕಾರಿಯಿಂದ ಮನೆಮನೆ ಭೇಟಿ ಹಾಗೂ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ, ಆಗಸ್ಟ್, 5 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಆ.5 ರಿಂದ ಸೆ.4ರ ವರೆಗೆ ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಜೊತೆಗೆ ಆ.5 ರಿಂದ ಅಕ್ಟೋಬರ್, 03 ರವರೆಗೆ ಸೂಚನೆ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅಕ್ಟೋಬರ್, 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಎಸ್.ಜೆ.ಸೋಮಶೇಖರ್ ಅವರು ಮಾಹಿತಿ ನೀಡಿದರು.
ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. ಈಗಾಗಲೇ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು, ತಹಶೀಲ್ದಾರರು ಮತ್ತು ತಾಂತ್ರಿಕ ಸಿಬ್ಬಂದಿಗೆ ಐಟಿ ಅಪ್ಲಿಕೇಶನ್‍ಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರ ನೋಂದಣಾಧಿಕಾರಿಗಳಿಂದ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.
ಪೂರ್ವ ಮಾಹಿತಿಯುಳ್ಳ ಗಣತಿ ನಮೂನೆಗಳನ್ನು ಮುದ್ರಿಸಿ ಸರಬರಾಜು ಮಾಡಲಾಗುತ್ತದೆ. ಮನೆ-ಮನೆ ಭೇಟಿ ಹಂತ ಸಂದರ್ಭ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ, ಪೂರ್ವ ಮಾಹಿತಿಯುಳ್ಳ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಿಸಿ, ಅವುಗಳನ್ನು ಭರ್ತಿ ಮಾಡಲು ಮಾರ್ಗದರ್ಶನ ನೀಡುತ್ತಾರೆ ಎಂದರು.
ಗಣತಿ ಸಮಯದಲ್ಲಿ ಮನೆಗೆ ಬೀಗ ಹಾಕಿದ್ದರೆ, ಅಧಿಕಾರಿಗಳು ಕನಿಷ್ಠ ಮೂರು ಬಾರಿ ಆ ಮನೆಗೆ ಭೇಟಿ ನೀಡಲು ಪ್ರಯತ್ನಿಸುತ್ತಾರೆ. ಈ ಸಂದರ್ಭ ಭರ್ತಿ ಮಾಡಿದ ನಮೂನೆಯನ್ನು ಮತದಾರರು ಕಡ್ಡಾಯವಾಗಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕು. ಅಧಿಕಾರಿಗಳು ಭರ್ತಿ ಮಾಡಿದ ನಮೂನೆ ಮತ್ತು ಅಗತ್ಯ ದಾಖಲೆಗಳನ್ನು ಪಡೆದು, ಒಂದು ಪ್ರತಿಗೆ ಸ್ವೀಕೃತಿ ನೀಡುತ್ತಾರೆ. ಜೊತೆಗೆ ಮತದಾರರು ದಾಖಲೆಗಳೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಆನ್‍ಲೈನ್ ಮೂಲಕವೂ ಅಪ್‍ಲೋಡ್ ಮಾಡಬಹುದು ಎಂದು ತಿಳಿಸಿದರು.
Kshetra Samachara
05/06/2026 07:02 pm