ಕೋಲ್ಕತ್ತಾ: ದೇಶದ ರೈಲ್ವೆ ಮೂಲಸೌಕರ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ದೆಹಲಿ-ಸಿಲಿಗುರಿ ಬುಲೆಟ್ ರೈಲು ಕಾರಿಡಾರ್ ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆಯ ಬಳಿಕ ಇದು ದೇಶದ ಎರಡನೇ ಬುಲೆಟ್ ರೈಲು ಕಾರಿಡಾರ್ ಆಗುವ ನಿರೀಕ್ಷೆ ಮೂಡಿಸಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆ ದೆಹಲಿ, ಲಕ್ನೋ, ವಾರಾಣಸಿ, ಪಾಟ್ನಾ ಮಾರ್ಗವಾಗಿ ಪಶ್ಚಿಮ ಬಂಗಾಳದ ಸಿಲಿಗುರಿಯನ್ನು ಸಂಪರ್ಕಿಸಲಿದೆ. ಪ್ರಸ್ತುತ 18 ರಿಂದ 20 ಗಂಟೆಗಳ ಪ್ರಯಾಣವನ್ನು ಕೇವಲ 6 ಗಂಟೆಗಳಿಗೆ ಇಳಿಸುವ ಗುರಿಯನ್ನು ಯೋಜನೆ ಹೊಂದಿದೆ. ಗಂಟೆಗೆ 250 ರಿಂದ 300 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ರೈಲು ಉತ್ತರ ಭಾರತ ಮತ್ತು ಈಶಾನ್ಯ ಭಾರತದ ನಡುವಿನ ಸಂಪರ್ಕಕ್ಕೆ ಹೊಸ ಆಯಾಮ ನೀಡಲಿದೆ.
ಸಿಲಿಗುರಿಯ ‘ಚಿಕನ್ ನೆಕ್’ ಕಾರಿಡಾರ್ ದೇಶದ ತಂತ್ರಜ್ಞಾನದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಈ ಯೋಜನೆ ಪ್ರವಾಸೋದ್ಯಮ, ವ್ಯಾಪಾರ, ಲಾಜಿಸ್ಟಿಕ್ಸ್ ಹಾಗೂ ರಕ್ಷಣಾ ವ್ಯವಸ್ಥೆಗೆ ದೊಡ್ಡ ಬಲ ನೀಡಲಿದೆ.
ಪಶ್ಚಿಮ ಬಂಗಾಳದ ರೈಲ್ವೆ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ.ಗಿಂತ ಅಧಿಕ ಹೂಡಿಕೆ ಯೋಜಿಸಲಾಗಿದ್ದು, 2026-27ನೇ ಸಾಲಿಗೆ ದಾಖಲೆಯ 14,205 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಆರಂಭವಾಗಲಿದ್ದು, 2028ರಲ್ಲಿ ಯೋಜನೆಗೆ ಭೂಮಿಪೂಜೆ ನಡೆಯುವ ನಿರೀಕ್ಷೆಯಿದೆ.
PublicNext
07/06/2026 02:57 pm